Rain Alert: ಚಿಕ್ಕಮಗಳೂರಿನ ಹಲವು ಕಡೆಗಳಲ್ಲಿ ತಂಪೆರೆದ ಮಳೆ
ರಾಜ್ಯದಲ್ಲಿ ಮತ್ತೆ ಮಳೆ ದರ್ಶನ ನೀಡಿದೆ. ಕಳೆದ ವಾರ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿ ಕಣ್ಮರೆಯಾಗಿದ್ದ ಮಳೆ, ಈ ವಾರಾಂತ್ಯದಲ್ಲಿ ಮತ್ತೆ ಹಲವು ಕಡೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆ ಆರಂಭವಾಗಿದೆ.
ಗುರುವಾರ ಸಂಜೆ ಜಿಲ್ಲೆಯ ಶೃಂಗೇರಿಯಲ್ಲಿ ಉತ್ತಮ ಮಳೆಯಾಗಿದೆ. ಮಳೆಯಾಗುವ ವಿಡಿಯೋವನ್ನು ಸ್ಥಳೀಯರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೃಂಗೇರಿ ಮಾತ್ರವಲ್ಲದ ಕಳಸ, ಕುದುರೆಮುಖ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಕಳೆದ ವಾರ ಕೊಡಗು, ಮೈಸೂರು, ಬೀದರ್, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಯ ಹಲವು ಕಡಗಳಲ್ಲಿ ಮಳೆಯಾಗಿದೆ. ಈ ವಾರ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಮಳೆ ಆರಂಭವಾಗಿದೆ.
It's raining in Sringeri.. #karnatakarains#rain #karnataka pic.twitter.com/sj94aUmzlJ
— Madhura Upadhya (@mupadhya) March 21, 2024
ಉತ್ತಮ ಮಳೆಯಾಗುವ ಮುನ್ಸೂಚನೆ!
ಈ ಬಾರಿ ರಾಜ್ಯದಲ್ಲಿ ಅವಧಿಗೂ ಮುನ್ನವೇ ಮಳೆ ಆರಂಭವಾಗುವ ಲಕ್ಷಣ ಇದೆ. ಹವಾಮಾನ ವರದಿಗಳು ಕೂಡ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಏಪ್ರಿಲ್ ಎರಡನೇ ವಾರ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಮಳೆ ಯಾವಾಗ?
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಯುಗಾದಿ ವೇಳೆಗೆ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಕೂಡ ಏಪ್ರಿಲ್ ಎರಡನೇ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಎಲ್ ನಿನೋ ಪರಿಸ್ಥಿತಿ ಕಡಿಮೆಯಾಗುತ್ತಿದ್ದು ಲಾ ನಿನಾ ಆರಂಭವಾಗಿದೆ. ಎಲ್ ನಿನೋ ತಾಪಮಾನ ಹೆಚ್ಚಳ, ಮಳೆ ಕಡಿಮೆಯಾಗಲು ಕಾರಣವಾದರೆ, ಲಾ ನಿನಾ ಅದಕ್ಕೆ ವಿರುದ್ಧವಾದ ಸ್ಥಿತಿಯಾಗಿದ್ದು ಉತ್ತಮ ಮಳೆಯನ್ನು ತರಲಿದೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಯಂತೆ ಉತ್ತಮ ಮಳೆಯಾಗುವ ಸೂಚನೆ ನೀಡಲಾಗಿದೆ.












Click it and Unblock the Notifications