Karnataka Weather: ಸೆಪ್ಟೆಂಬರ್ 20ರ ಬಳಿಕ ಈ ಜಿಲ್ಲೆಗಳಲ್ಲಿ ಭಾರೀ ಮಳೆ
ಆಗಸ್ಟ್‌ನಲ್ಲಿ ಸಂಪೂರ್ಣವಾಗಿ ಕೈಕೊಟ್ಟಿದ್ದ ಮಳೆ ಸೆಪ್ಟೆಂಬರ್ ತಿಂಗಳಿನಲ್ಲಿ ವಾಪಸಾಗಿದೆ. ಆದರೂ, ರಾಜ್ಯದ ಜಲಾಶಯಗಳಿಗೆ ನೀರು ಬರುವಂತೆ ಮಳೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಮಲೆನಾಡು, ಕರಾವಳಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದರೂ, ನದಿಗಳು ತುಂಬಿ ಹರಿಯದೇ ಇರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಆದರೂ, ಸೆಪ್ಟೆಂಬರ್ 20ರ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮತ್ತಷ್ಟು ತೀವ್ರವಾಗಲಿದೆ ಎಂದು ಹೇಳಿದ್ದು, ಜಲಾಶಯಗಳಿಗೆ ನೀರು ಹರಿದುಬರುವ ಸಾಧ್ಯತೆ ಇದೆ. ಸೆಪ್ಟೆಂಬರ್ 20 ರ ನಂತರ ಕರ್ನಾಟಕದಲ್ಲಿ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಮೈಸೂರು ಕೂಡ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಆದರೆ ಪೂರ್ವ ಮತ್ತು ಉತ್ತರ ಭಾಗಗಳ ಕಡೆಗೆ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿದ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ!
ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾದರೆ ಕಬಿನಿ, ಕೆಆರ್ ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಲಿದೆ. ಭಾಗಮಂಡಲದಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿದ್ದರು, ನದಿಯ ಹರಿವು ಹೆಚ್ಚಾಗುವಂತೆ ಮಳೆಯಾಗದಿರುವುದು ನಿರಾಸೆ ಮೂಡಿಸಿದೆ.
ಸದ್ಯ ಕೃಷ್ಣರಾಜ ಸಾಗರ (ಕೆಆರ್ ಎಸ್) ಜಲಾಶಯದಲ್ಲಿ 97.74 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಸದ್ಯ 21.09 ಟಿಎಂಸಿ ನೀರು ಇದ್ದು, 2741 ಕ್ಯೂಸೆಕ್ ಒಳಹರಿವು ಇದ್ದು, 4498 ಕ್ಯೂಸೆಕ್ ಹೊರಹರಿವು ಇದೆ.
ಕಬಿನಿ ಡ್ಯಾಂನಲ್ಲಿ 14.86 ಟಿಎಂಸಿ ನೀರಿನ ಸಂಗ್ರಹವಿದ್ದು, ಜಲಾಶಯದ ಸಾಮರ್ಥ್ಯ 19.52 ಟಿಎಂಸಿ ಯಾಗಿದೆ. ಕಬಿನಿ ಜಲಾಶಯಕ್ಕೆ 4605 ಕ್ಯೂಸೆಕ್ ಒಳಹರಿವು ಇದ್ದು, 3490 ಕ್ಯೂಸೆಕ್ ಹೊರಹರಿವು ಇದೆ. ಹಾರಂಗಿ ಜಲಾಶಯದಲ್ಲಿ 2858 ಅಡಿ ನೀರು ಸಂಗ್ರಹವಾಗಿದ್ದು, ಇದೊಂದು ಜಲಾಶಯ ಮಾತ್ರ 97.85 ಪ್ರತಿಶತ ತುಂಬಿದೆ. 1067 ಕ್ಯೂಸೆಕ್ ಒಳಹರಿವು ಇದ್ದು, 800 ಕ್ಯೂಸೆಕ್ ಹೊರ ಹರಿವು ಇದೆ.
ಮಳೆಯಾದರೆ ಮಾತ್ರ ಉಳಿಗಾಲ!
ಈಗಾಗಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರಿಗೆ ಬೆಳೆ ಬೆಳೆಯದಂತೆ ಸೂಚನೆ ನೀಡಲಾಗಿದೆ. ಕುಡಿಯುವ ನೀರನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಈ ನಡುವೆ ತಮಿಳುನಾಡಿಗೆ ಮತ್ತೆ 15 ದಿನ ನೀರು ಬಿಡುವಂತೆ ಆದೇಶ ಬಂದಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ. ಮಳೆಗೆ ಮಾತ್ರ ಈ ಸಮಸ್ಯೆ ಸರಿ ಮಾಡುವ ತಾಕತ್ತಿದೆ.
ಸೆಪ್ಟೆಂಬರ್ ಕೊನೆಯಲ್ಲಿ ಆದರೂ ಮಳೆ ಅಬ್ಬರಿಸಿದರೆ ರೈತರಿಗೆ ಕನಿಷ್ಠ ಮುಂದಿನ ದಿನಗಳಲ್ಲಿ ಬೆಳೆ ಬೆಳೆಯಲು ಅವಕಾಶ ಸಿಗುತ್ತದೆ ಇಲ್ಲವಾದರೆ ರಾಜ್ಯದ ರೈತರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಲಿದೆ.












Click it and Unblock the Notifications