ಬಿಸಿಯೇರುತ್ತಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ
ಚನ್ನಪಟ್ಟಣ, ಸೆಪ್ಟೆಂಬರ್ 20: ಮುಂಬರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಮತ್ತೆ ತಾಲ್ಲೂಕಿನ ರಾಜಕೀಯ ಮುಖಂಡರುಗಳ ಗಮನ ಹರಿಯುತ್ತಿದ್ದು, ಈಗಾಗಲೇ ಮತ ಬೇಟೆಗೆ ಆಕಾಂಕ್ಷಿಗಳು ತಹತಹಿಸುತ್ತಿದ್ದಾರೆ.
ಹಾಲಿ ಸಂಘದ ನಿರ್ದೇಶಕರು, ಮಾಜಿ ನಿರ್ದೇಶಕರು, ಕಳೆದ ಬಾರಿ ಪರಾಭವಗೊಂಡವರು ಹಾಗೂ ಹೊಸದಾಗಿ ಅದೃಷ್ಟ ಪರೀಕ್ಷೆಗೆ ಇಳಿದವರು ಮತದಾರರ ಮನೆಗಳತ್ತ ಎಡತಾಕುತ್ತಿದ್ದಾರೆ. ಚುನಾವಣೆ ಬಹುತೇಕ ನವೆಂಬರ್ ತಿಂಗಳಲ್ಲಿ ನಡೆಯಲಿದ್ದರೂ ಆಕಾಂಕ್ಷಿಗಳು ಮಾತ್ರ ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಸಾಕಷ್ಟು ತಾಲೀಮು ನಡೆಸುತ್ತಿದ್ದಾರೆ.

ಸಂಘದ 34 ನಿರ್ದೇಶಕ ಸ್ಥಾನಗಳ ಪೈಕಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಿಂದ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಉಳಿದ 19 ನಿರ್ದೇಶಕ ಸ್ಥಾನಗಳು ರಾಜ್ಯದ ಇತರೆ ಜಿಲ್ಲೆಗಳಿಗೆ ಸೀಮಿತವಾಗಿವೆ.
ಅದರಂತೆ ಚನ್ನಪಟ್ಟಣ ತಾಲೂಕಿನಿಂದ ಹಾಲಿ ಪ್ರೊ. ಕೆ ಮಲ್ಲಯ್ಯ, ಎಂಎ ಅನಂದ್, ಎಂಬಿ ಮಲ್ಲಿಕಾರ್ಜುನೇ ಗೌಡ, ಡಾ. ಅಪ್ಪಾಜಿಗೌಡ ನಿರ್ದೇಶಕರಾಗಿದ್ದು, ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಲ್ಲದೆ ಕಳೆದ ಬಾರಿ ಪರಾಭವಗೊಂಡಿರುವ ತಾಲೂಕಿನ ಬಿಎಲ್ ಪ್ರಸನ್ನ ಕುಮಾರ್, ಕುಕ್ಕೂರುದೊಡ್ಡಿ ಶಿವಣ್ಣ ಕೂಡ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಉಳಿದಂತೆ ಹೊಸ ಮುಖಗಳಾದ ಸಮಾಜ ಸೇವಕ ಎಚ್ ಸಿ ಜಯಮುತ್ತು ಕೂಡ ಬಿರುಸಾಗಿ ಪ್ರಚಾರ ನಡೆಸುತ್ತಿದ್ದಾರೆ.
ಪ್ರಸ್ತುತ ಕೇಳಿ ಬರುತ್ತಿರುವ ಸಿಂಡಿಕೇಟ್‌ಗಳು
ಕೆಂಚಪ್ಪಗೌಡ ತಂಡ
ಪ್ರೊ. ನಾಗರಾಜು, ಡಾ. ಅಪ್ಪಾಜಿಗೌಡ ಸಿಂಡಿಕೇಟ್
ಪ್ರೊ.ಕೆ ಮಲ್ಲಯ್ಯ ಸಿಂಡಿಕೇಟ್
ಪುಟ್ಟಣ್ಣ ಸ್ಪರ್ಧೆ ಇಲ್ಲ?: ಕಳೆದ ಬಾರಿ ಪರಾಭವಗೊಂಡ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರೂ ಆಗಿರುವ ಎಂಎಲ್ ಸಿ ಪುಟ್ಟಣ್ಣ ಈ ಬಾರಿ ಒಕ್ಕಲಿಗರ ಸಂಘದ ಚುನಾವಣೆಯಿಂದ ದೂರ ಉಳಿದಿದ್ದಾರೆ. ಜೂನ್‌ನಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿರುವುದರಿಂದ ಅವರು ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಆದರೆ, ಅವರ ಸಹೋದರ ಕೆಪಿ ಕಾಂತರಾಜು ಮತ್ತು ಮಿತ್ರ ಬಮೂಲ್ ನಿರ್ದೇಶಕ ಎಸ್ ಲಿಂಗೇಶ್ ಕುಮಾರ್ ಕಣಕ್ಕಿಳಿಯಲಿದ್ದಾರೆ ಎಂದು ಗುಸುಗುಸು ಇದ್ದರೂ ಈ ಬಗ್ಗೆ ಖಚಿತ ಮಾಹಿತಿಯಿಲ್ಲ.
ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 70 ಸಾವಿರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 17 ಸಾವಿರ ಹಾಗೂ ರಾಮನಗರ ಜಿಲ್ಲೆಯಲ್ಲಿ 20 ಸಾವಿರದಷ್ಟು ಮತದಾರರಿದ್ದಾರೆ. ಅದರಲ್ಲಿ ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣ ತಾಲೂಕಿನಲ್ಲಿ 10 ಸಾವಿರದಷ್ಟು ಮತದಾರರಿದ್ದು, ರಾಮನಗರ, ಕನಕಪುರ ಹಾಗೂ ಮಾಗಡಿ ತಾಲೂಕಿನಲ್ಲಿ 10 ಸಾವಿರ ಮತದಾರಿದ್ದಾರೆ. ಅದ್ದರಿಂದ ಎಲ್ಲಾ ಅಭ್ಯರ್ಥಿಗಳು ಸ್ಥಳೀಯವಾಗಿ ಹೆಚ್ಚು ಮತಗಳನ್ನು ಪಡೆದುಕೊಳ್ಳುವುದರ ಜತೆಗೆ ಬೆಂಗಳೂರು ನಗರ ಜಿಲ್ಲೆಯ ಮತದಾರರನ್ನು ಸೆಳೆಯಲು ಸರ್ಕಸ್ ಮಾಡುತ್ತಿದ್ದಾರೆ.
ವಿರುದ್ಧ ದಿಕ್ಕು: ಕಳೆದ ಬಾರಿ ಹಾಲಿ ಅಧ್ಯಕ್ಷ ಕೆಂಚಪ್ಪ ಗೌಡರ ತಂಡದಲ್ಲಿದ್ದು ಆಯ್ಕೆಯಾಗಿದ್ದ ಬಹುತೇಕ ಮಂದಿ ಈಗ ತಮ್ಮದೇ ಪ್ರತ್ಯೇಕ ತಂಡಗಳನ್ನು ಕಟ್ಟಿಕೊಂಡು ಜತೆಗೆ ಹಣಬಲವುಳ್ಳ ಹಾಗೂ ಒಂದಷ್ಟು ಚರ್ಚಸ್ಸು ಉಳಿಸಿಕೊಂಡಿರುವ ಹೊಸ ಮುಖಗಳನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡು ಗೆಲುವಿಗಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸ್ನೇಹಿತರೇ ಅಖಾಡದಲ್ಲಿ?: ಇದೊಂದು ಜಾತಿ ಕೇಂದ್ರಿತ ಚುನಾವಣೆಯಾದರೂ ಬಹುತೇಕರು ಒಂದೊಂದು ರಾಜಕೀಯ ಪಕ್ಷವನ್ನು ಅಪ್ಪಿಕೊಂಡಿದ್ದಾರೆ. ಅಲ್ಲದೆ ಈವರೆಗೆ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು ಸಂಘದ ಚುನಾವಣೆಯಲ್ಲಿ ಪ್ರತ್ಯೇಕ ಬಣಗಳಿಂದ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ, ಒಂದು ಪಕ್ಷದಲ್ಲಿದ್ದುಕೊಂಡು ವಿರೋಧಿಗಳನ್ನು ಹೀಯಾಳಿಸುತ್ತಿದ್ದವರು.
ತಮ್ಮ ಪಕ್ಷದ ಆಕಾಂಕ್ಷಿಗಳ ಸಖ್ಯ ಬಿಟ್ಟು, ತಮ್ಮ ಗೆಲುವಿಗಾಗಿ ವಿರೋಧಿ ಪಕ್ಷದ ಮುಖಂಡರಿರುವ ಬಣಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ತಮ್ಮ ನೆಚ್ಚಿನ ನಾಯಕರನ್ನು ಗೆಲ್ಲಿಸಬೇಕೆನ್ನುವ ಹಠಕ್ಕೆ ಬಿದ್ದಿರುವ ಅನ್ಯ ಕೋಮಿಗೆ ಸೇರಿದ ಹಿಂಬಾಲಕರು ಕೂಡ ಜಾತಿ ಕೇಂದ್ರಿತ ಚುನಾವಣೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ವಿಶೇಷ ಎನ್ನಬಹುದು.












Click it and Unblock the Notifications