ಡೀಸೆಲ್ ಬೆಲೆ ಏರಿಕೆ; ಏಪ್ರಿಲ್ 15ರಿಂದ ಕರ್ನಾಟಕ ಲಾರಿ ಮಾಲಿಕರ ಸಂಘದಿಂದ ಅನಿರ್ದಿಷ್ಟ ಮುಷ್ಕರ
ಕರ್ನಾಟಕ ಕಾಂಗ್ರೆಸ್ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ ಪರಿಣಾಮ ಪ್ರತಿ ಲೀಟರ್ ಡೀಸೆಲ್ ಬೆಲೆ 2 ರೂಪಾಯಿ ಏರಿಕೆಯಾಗಿದೆ. ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಲಾರಿ ಮಾಲೀಕರ ಸಂಘ ಕೂಡ ಡೀಸೆಲ್ ಬೆಲೆ ಏರಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಷ್ಕರಕ್ಕೆ ಕರೆ ಕೊಟ್ಟಿದೆ. ಏಪ್ರಿಲ್ 15 ರಿಂದ ಅನಿರ್ದಿಷ್ಟ ಮುಷ್ಕರ ನಡೆಸುವುದಾಗಿ ತಿಳಿಸಿದೆ.
ಕರ್ನಾಟಕ ಸರ್ಕಾರ ಪ್ರಮುಖ ಸಾರಿಗೆ ಸಮಸ್ಯೆಗಳ ಕುರಿತು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಮುಷ್ಕರಕ್ಕೆ ಮುಂದಾಗಿದೆ. ಆರು ಲಕ್ಷಕ್ಕೂ ಹೆಚ್ಚು ಸರಕು ವಾಹನಗಳು ರಸ್ತೆಗೆ ಇಳಿಯದೇ ಇರಲು ನಿರ್ಧರಿಸಿದ್ದು, ಮುಷ್ಕರವು ಅಗತ್ಯ ವಸ್ತುಗಳ ಸಂಚಾರ, ಇಂಧನ ಲಭ್ಯತೆ ಮತ್ತು ವಿಮಾನ ನಿಲ್ದಾಣ ಸಂಪರ್ಕದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಏಪ್ರಿಲ್ 15 ರಂದು ಬೆಳಿಗ್ಗೆ 6 ಗಂಟೆಗೆ ಬಂದ್ ಆರಂಭವಾಗಲಿದೆ. ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರೂ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು. ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ರದ್ದುಪಡಿಸುವುದು, ಗಡಿ ಚೆಕ್ ಪೋಸ್ಟ್‌ಗಳನ್ನು ತೆಗೆದುಹಾಕುವುದು, ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ಶುಲ್ಕವನ್ನು ಕಡಿಮೆ ಮಾಡುವುದು ಮತ್ತು ನಗರ ವ್ಯಾಪ್ತಿಯಲ್ಲಿ ಸರಕು ವಾಹನಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಲಾಗಿದೆ.
ಏಪ್ರಿಲ್ 14ರ ವರೆಗೆ ಗಡುವು
ಲಾರಿ ಮಾಲೀಕರ ಸಂಘದ ಮುಷ್ಕರದ ನಿರ್ಧಾರಕ್ಕೆ ವ್ಯಾಪಕ ಬೆಂಬಲ ಸಿಕ್ಕಿದೆ. ಪೆಟ್ರೋಲಿಯಂ ಸಂಸ್ಥೆಗಳು ಪೆಟ್ರೋಲ್ ಪಂಪ್‌ಗಳು ಮತ್ತು ವಿಮಾನ ನಿಲ್ದಾಣ ಟ್ಯಾಕ್ಸಿ ಒಕ್ಕೂಟಗಳು ಸಹ ಪ್ರತಿಭಟನೆಗೆ ಕೈಜೋಡಿಸಲು ನಿರ್ಧರಿಸಿವೆ. ಏಪ್ರಿಲ್ 14 ರೊಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮುಷ್ಕರವು ಅನಿರ್ದಿಷ್ಟಾವಧಿಗೆ ಮುಂದುವರಿಯುತ್ತದೆ, ರಾಜ್ಯದ ಮೇಲೆ ಬೀರುವ ಪರಿಣಾಮಕ್ಕೆ ಸರ್ಕಾರವೇ ಹೊಣೆ ಎಂದು ಸಂಘ ಎಚ್ಚರಿಕೆ ಕೊಟ್ಟಿದೆ.
ಈ ಮುಷ್ಕರವು ಸಾರ್ವಜನಿಕರನ್ನು ನೇರವಾಗಿ ಗುರಿಯಾಗಿಸಿಕೊಂಡಿಲ್ಲ. ತರಕಾರಿಗಳು, ಹಣ್ಣುಗಳು, ಇಂಧನ ಮತ್ತು ಇತರ ಸರಕುಗಳ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಬಹುದು. ಸರ್ಕಾರ ಏನಾದರೂ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಒಪ್ಪಿಕೊಂಡರೆ ಮಾತ್ರ ಮುಷ್ಕರವನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ.












Click it and Unblock the Notifications