KSRTC Employees: ರಾಜ್ಯ ಸಾರಿಗೆ ನೌಕರರ ವೇತನ ಪರಿಷ್ಕರಣೆ, ಹಿಂಬಾಕಿ ವೇತನ: ಬಿಜೆಪಿ vs ಕಾಂಗ್ರೆಸ್
ಬೆಂಗಳೂರು ಫೆಬ್ರವರಿ 18: ಕರ್ನಾಟಕ ರಾಜ್ಯ ಸಾರಿಗೆ ನೌಕರರ ವೇತನ ಪರಿಷ್ಕರಣೆ, ಹಿಂಬಾಕಿ ವೇತನ ಪಾವತಿ ಸೇರಿದಂತೆ ಅನೇಕ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ರಾಜ್ಯ ಸರ್ಕಾರ ಪುನಃ ಸಾರಿಗೆ ನೌಕರರನ್ನು ನಿರ್ಲಕ್ಷಿಸುತ್ತಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಡು ಬಡವಾಯ್ತು ಎಂಬಂತೆ, ಬಿಜೆಪಿ-ಕಾಂಗ್ರೆಸ್ ಆರೋಪಗಳ ಮಧ್ಯೆ ಸಾರಿಗೆ ನೌಕರರ ಸಮಸ್ಯೆಗೆ ಪರಿಹಾರ ಮರಿಚಿಕೆ ಆಗಿದೆ.
ಸಾರಿಗೆ ನೌಕರರ ಸಮಸ್ಯೆಯನ್ನು ಸಂಕ್ರಾಂತಿಗೆ ಪರಿಹರಿಸುವುದಾಗಿ ಇದೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದರು. ಆದರೆ ಶಿವರಾತ್ರಿ ಎದುರಾದರೂ ಇನ್ನೂವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂದು ರಾಜ್ಯ ಬಿಜೆಪಿಯು ಕಾಂಗ್ರೆಸ್ ಕಾಲೆಳೆದಿದೆ. ಆದ ಸಮಸ್ಯೆ ಏನು, ಎಷ್ಟು ಕೋಟಿಗಳ ನಷ್ಟವಾಗಿದೆ ಎಂದೆಲ್ಲ ವಿಚಾರಗಳಿಗೆ ಕರ್ನಾಟಕ ಕಾಂಗ್ರೆಸ್ ಉತ್ತರಿಸಿ ಬಿಜೆಪಿಗೆ ಪ್ರತಿಯಾಗಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ.

₹5,900 ಕೋಟಿ ನಷ್ಟ ಹೊಣೆಗಾರಿಕೆ
ಕಾಂಗ್ರೆಸ್ ಪಕ್ಷವು, ನಿಮ್ಮ ಸರ್ಕಾರ ಬಿಟ್ಟು ಹೋಗಿದ್ದ ₹5,900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ, ಖರೀದಿ ಸಾಮಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸಲು ಹರಸಾಹಸ ಪಡುತ್ತಿದ್ದೇವೆ ಎಂದು ಬಿಜೆಪಿ ಅವಧಿಯಲ್ಲಿನ ಸಾರಿಗೆ ಬಾಕಿ ಹಣ ಕುರಿತು ಲೆಕ್ಕ ನೀಡಿ, ಬಿಜೆಪಿ ವಿರುದ್ಧ ಕುಟುಕಿದೆ.
2023 ಮಾರ್ಚ್‌ನಲ್ಲಿ, 38 ತಿಂಗಳುಗಳ ನಂತರ ಸಂಬಳ ಏರಿಕೆ ಮಾಡಿ, ಏರಿಕೆಯಾದ ಸಂಬಳ ಮತ್ತು 38 ತಿಂಗಳ ಅರಿಯರ್ಸ್, ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಬಾಕಿ ಹಣ ನೀಡದೆ, ಇವುಗಳಿಗೆ ಬೇಕಾದ ಯಾವುದೇ ಅನುದಾನವನ್ನೂ ಒದಗಿಸಿಲ್ಲ. ನಿವೃತ್ತಿ ಹೊಂದಿದ 11694 ಸಿಬ್ಬಂದಿಗಳಿಗೆ ತಮ್ಮ ಕಾಲದ ಉಪಧನ ಮತ್ತು ಗಳಿಕೆ ರಜೆ ಬಾಕಿ ಹಣ ರೂ.224.05 ಕೋಟಿ ನಾವು ಪಾವತಿಸಿದ್ದೇವೆ. ತಮ್ಮ ದುರಾಡಳಿತ, ಹೊಣೆಗೇಡಿತನ, ಬೇಜವಾಬ್ದಾರಿಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಎಂದು ಪ್ರಶ್ನಿಸಿದೆ.

ಬಿಜೆಪಿಗೆ ಕಾಂಗ್ರೆಸ್ ತರಾಟೆ
38 ತಿಂಗಳುಗಳು ತಡವಾಗಿ ವೇತನ ಪರಿಷ್ಕರಿಸಿದ ಅವಧಿ ತಡವಲ್ಲವೇ? ತಾವು ಪಾವತಿಸದೇ ಹೋದ 38 ತಿಂಗಳ ಬಾಕಿ ಅರಿಯರ್ಸ್ ಅನ್ನು ನಾವು ಪಾವತಿಸಿಲ್ಲ ಎಂದು ಹೇಳುತ್ತಿದ್ದೀರಿ. ನಿಮಗೆ ಆತ್ಮಸಾಕ್ಷಿ ಎಂಬುದಿದೆಯೇ? ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಆಗಿಲ್ಲ. ಹೊಸ ಬಸ್ಸುಗಳ ಸೇರ್ಪಡೆ ಮಾಡದೇ ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದ ನೀವು, ಎರಡು ತಿಂಗಳು ತಡವಾಗಿದೆ ಎನ್ನುತ್ತಿದ್ದೀರಿ. 5 ವರ್ಷದ ತಮ್ಮ ಆಡಳಿತ ಅವಧಿಯ ಶೂನ್ಯ ಸಾಧನೆಗೆ ಯಾವ ಬಿರುದು ಕೊಟ್ಟರೂ ಕಡಿಮೆಯೇ! ಎಂದು ಟೀಕಿಸಿದೆ.
ಮುಷ್ಕರ ಹಮ್ಮಿಕೊಂಡಿದ್ದ ನೌಕರರು
ರಾಜ್ಯ ಸರ್ಕಾರಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡದೇ ದಿನಕಳೆಯುತ್ತಿದೆ ಎಂದು ಸಾರಿಗೆ ನೌಕರರು ಕಳೆದ ಡಿಸೆಂಬರ್ 31ರಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು. 38 ತಿಂಗಳ ಬಾಕಿ ವೇತನ, ನಿವೃತ್ತ ನೌಕರರಿಗೆ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದರು.
ಈ ವೇಳೆ ಮಧ್ಯ ಪ್ರವೇಶಿಸಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಷ್ಕರ ಕೈ ಬಿಡಿಸುವಲ್ಲಿ ಯಶಸ್ವಿಯಾದರು. ಜನವರಿ 14ರಂದು ಸಂಕ್ರಾಂತಿ ಹೊತ್ತಿಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಅದರೆ ಶಿವರಾತ್ರಿ ಬಂದರೂ ಭರವಸೆ ಈಡೇರಿಲ್ಲ. ಹೀಗಾಗಿ ಬಿಜೆಪಿಯು ಕಾಂಗ್ರೆಸ್ ನಡೆಗೆ ಆಕ್ರೋಶ ಹೊರ ಹಾಕಿದೆ.
ನೌಕರರ ಕಿವಿ ಮೇಲೆ ಹೂವಿಟ್ಟ ಸರ್ಕಾರ: ಬಿಜೆಪಿ ಹೇಳಿದ್ದೇನು?
ಹಲೋ ಸಾರಿಗೆ ಇಲಾಖೆಯನ್ನು ಬರ್ಬಾದ್ ಮಾಡಿರುವ ಸಚಿವ ರಾಮಲಿಂಗಾ ರೆಡ್ಡಿಯವರೇ ಸಾರಿಗೆ ನೌಕರರಿಗೆ ಕೊಟ್ಟ ಮಾತು ನೆನಪು ಇದೆಯೇ? ಎಂದು ಭರವಸೆಯನ್ನು ಜ್ಞಾಪಿಸಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾಗ ಸಂಕ್ರಾಂತಿಗೆ ನೌಕರರ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿ ಮುಷ್ಕರ ತಡೆ ಹಿಡಿದಿದ್ದ ಕಾಂಗ್ರೆಸ್ ಸರ್ಕಾರವು, ನೌಕರರ ಸರ್ಕಾರ ಕಿವಿ ಮೇಲೆ ಹೂವಿಟ್ಟು ಸೈಲೆಂಟ್ ಆಗಿದೆ.
ವೇತನ ಪರಿಷ್ಕರಣೆ ಹಾಗೂ ಹಿಂಬಾಕಿ, ನಿವೃತ್ತಿ ನೌಕರರ ಬಾಕಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಪುಂಗಿ ಊದಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಇದೀಗ ಅವರಿಗೆ ಚಿಪ್ಪು ಕೊಡುವ ತಯಾರಿ ಮಾಡಿಕೊಂಡಿದೆ ಎಂದು ದೂರಿತ್ತು ಅದಕ್ಕೀಗ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷ ತಿರುಗೇಟು ಕೊಟ್ಟಿದೆ.












Click it and Unblock the Notifications