Industry Pollution: ರಾಜ್ಯದ 215 ಕೈಗಾರಿಕೆಗಳ ಮಾಲೀಕರಿಗೆ ಸರ್ಕಾರ ಶಾಕ್?
ಬೆಂಗಳೂರು, ಏಪ್ರಿಲ್ 07: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವುಗಳಿಂದ ಹೊರ ಸೂಸುವ ಹೊಗೆ, ಕಾರ್ಖಾನೆಗಳು ಹಾಗೂ ಮುಂತಾದ ಕಾರಣಗಳಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಹೀಗೆ ಕಲುಷಿತಗೊಂಡ ಪರಿಸರದಿಂದ ನೆಲ, ಜಲ, ಪ್ರಾಣಿಗಳ ಜೊತೆಗೆ ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಉತ್ತಮ ವಾತಾವರಣ ನಿರ್ಮಾಣಕ್ಕೆ ರಾಜ್ಯ ಕೈಗಾರಿಕೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
ಕರ್ನಾಟಕ ರಾಜ್ಯದಲ್ಲಿರುವ ಎಲ್ಲ 215 ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ವಿವಿಧ ರೀತಿಯ ಮಾಲಿನ್ಯ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (IISc), ಐಐಟಿ ತರಹದ ಉನ್ನತ ಮಟ್ಟದ ಸಂಸ್ಥೆಗಳಿಂದ ವಿಸ್ತೃತ ಅಧ್ಯಯನ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಅವರು ಸೋಮವಾರ ಸಭೆ ನಡೆಸಿ ಅವರು ಮಾತನಾಡಿದರು.
ಈ ಪರಿಣಾಮಗಳ ಅಧ್ಯಯನ ಮಾಡಿ ವರದಿ ನೀಡಿ!
ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯಮ ನಡೆಸಲು ಅನುಮತಿ ನಡೆಸುವಾಗ ರಾಜ್ಯ ಸರ್ಕಾರ ಹಲವು ಮಾನದಂಡಗಳನ್ನು ನೀಡಿರುತ್ತದೆ. ಆದರೆ ನಂತರದ ದಿನಗಳಲ್ಲಿ ಏನಾಗುತ್ತದೆ ಎನ್ನುವುದರ ಪರಿಶೀಲನೆ ಕೂಡ ಅಗತ್ಯ. ಉದ್ಯಮಗಳನ್ನು ಬೆಳೆಸುವ ಜೊತೆಯಲ್ಲೇ ನಾವು ನೆಲ, ಜಲ, ವಾಯು, ಕೃಷಿ ಮತ್ತು ಮನುಷ್ಯರ ಮೇಲಾಗುತ್ತಿರುವ ಪರಿಣಾಮಗಳನ್ನೂ ಅಧ್ಯಯನ ಮಾಡಿ, ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಕೈಗಾರಿಕಾ ಮಾಲಿನ್ಯ ಕುರಿತು ಉನ್ನತ ಮಟ್ಟದ ತಂಡಗಳಿಂದ ಅಧ್ಯಯನ ನಡೆಸಲಾಗುವುದು. ಈ ತಂಡಗಳು ಎಲ್ಲಾ ಕೈಗಾರಿಕಾ ಪ್ರದೇಶಗಳಿಗೂ ಖುದ್ದು ಭೇಟಿ ನೀಡಲಿವೆ. ಜತೆಗೆ ಮಾಲಿನ್ಯದ ತೀವ್ರತೆ ಆಧರಿಸಿ, ಆಯಾ ಉದ್ಯಮಗಳು ಯಾವ ಬಗೆಯ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದನ್ನೂ ಈ ಸಮಿತಿಯೇ ತಿಳಿಸಲಿದೆ ಎಂದು ಅವರು ವಿವರಿಸಿದರು.
ಈ ಉದ್ದೇಶಕ್ಕಾಗಿ ಸೂಕ್ತ ಸಂಸ್ಥೆಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದ್ದಾರೆ. ನಿರ್ದಿಷ್ಟ ಕಾಲಮಿತಿಯಲ್ಲಿ ಈ ತಂಡಗಳು ತಮ್ಮ ವರದಿ ಸಲ್ಲಿಸುವಂತೆ ಸೂಚಿಸಬೇಕು ಎಂದರು.
9 ಜಿಲ್ಲೆಗಳಲ್ಲಿ 69 ಯೋಜನೆಗೆ ಒಪ್ಪಿಗೆ: ಅಪಾರ ಉದ್ಯೋಗ ಸೃಷ್ಟಿ
ಇತ್ತೀಚೆಗೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ 152ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸಮ್ಮತಿ ದೊರೆತಿದೆ. ಒಟ್ಟು ₹3,500.86 ಕೋಟಿ ಬಂಡವಾಳ ಹೂಡಿಕೆಯ 69 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ತಯಾರಿಕಾ ಘಟಕ ಸ್ಥಾಪನೆ ಸರ್ಕಾರ ಮುಂದಾಗಿದೆ.
ವಿಜಯಪುರ ಸೇರಿದಂತೆ ತುಮಕೂರು, ರಾಮನಗರ, ಕೋಲಾರ, ಬೆಳಗಾವಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಹೊಸ ಕೈಗಾರಿಕೆಗಳು ಅಸ್ತಿತ್ವಕ್ಕೆ ಬರಲಿವೆ. ಇದರಿಂದಾಗಿ ರಾಜ್ಯದಲ್ಲಿ 24,954 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.












Click it and Unblock the Notifications