ಕೇರಳ ಮಳೆ ಸಂಕಟಕ್ಕೆ ಮಿಡಿದ ಕರ್ನಾಟಕ, 10 ಕೋಟಿ ನೆರವು
Recommended Video

ಬೆಂಗಳೂರು, ಆಗಸ್ಟ್ 10 : ಕೇರಳ ಭಾರಿ ಮಳೆಯಿಂದ ತತ್ತರಿಸಿದೆ, ಸಂಭವಿಸಿದ ಪ್ರವಾಹದಲ್ಲಿ 22 ಜನರು ಸಾವನ್ನಪ್ಪಿರುವ ಕುರಿತು ಮುಖ್ಯಮಂತ್ರಿ ಎಚ್ ಡಿ. ಕುಮಾರಸ್ವಾಮಿ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಕೇರಳಕ್ಕೆ 10 ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿ ರವಾನೆ ಮಾಡಲು ಹಾಗೂ ವೈದ್ಯರ ತಂಡ ಕಳುಹಿಸಿ ಕೊಡುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ನಿರ್ದೇಶನ ನೀಡಿದ್ದಾರೆ.
ಪ್ರವಾಹ ಪರಿಸ್ಥಿತಿ ಎದುರಿಸಲು ಕೇರಳ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಈಗಾಗಲೇ ಕಬಿನಿಯ ಹಿನ್ನೀರಿನಿಂದ ಪ್ರವಾಹ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಕುರಿತು ಕೇರಳ ಸರ್ಕಾರ ಮಾಡಿರುವ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ 75,000 ಕ್ಯೂಸೆಕ್ಸ್ ನೀರನ್ನು ಕಬಿನಿ ಜಲಾಶಯದಿಂದ ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದು, ಅದರಂತೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದ್ದಾರೆ.
ಕೇರಳದಲ್ಲಿ ಮಳೆಯ ಆರ್ಭಟ ಹಾಗೂ ಭೂಕುಸಿತಕ್ಕೆ ಇಬ್ಬರು ಮಕ್ಕಳು ಸೇರಿದಂತೆ 22 ಮಂದಿ ಮೃತಪಟ್ಟಿದ್ದಾರೆ. ಮೂವರು ಕಾಣೆಯಾಗಿದ್ದಾರೆ. ನದಿಗಳು ಮೈದುಂಬಿ ಹರಿಯುತ್ತಿದೆ. ನದಿ ತೀರದ ಮನೆಗಳು ಹಾಗೂ ಗ್ರಾಮಗಳಿಗೆ ನೀರು ನುಗ್ಗಿ, ಮನೆಗಳು ಜಲಾವೃತವಾಗಿದೆ.

ಇಡುಕಿಯಲ್ಲಿ ಸಂಭವಿಸಿದ ಭೂಕುಸಿತಕ್ಕೆ 10 ಮಂದಿ, ಮಲ್ಲಪುರಂನಲ್ಲಿ 5 ಮಂದಿ, ಕಣ್ಣೂರಿನಲ್ಲಿ 2 ಮಂದಿ, ವಯನಾಡಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಭೀತಿ ಎದುರಾಗಿದೆ.












Click it and Unblock the Notifications