25 New Railway Lines: ಕರ್ನಾಟಕಕ್ಕೆ ಕೇಂದ್ರದಿಂದ ಬಂಪರ್, 3264 ಕಿಮೀ. ಉದ್ದದ ರೈಲ್ವೆ ಯೋಜನೆಗಳು,ಎಲ್ಲೆಲ್ಲಿ?
Karantaka Railways New Projects: ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಸಾರಿಗೆ ಸಂಪರ್ಕ ಮೂಲೆ ಮೂಲೆಗಳಿಗೂ ಸಿಗುವಂತೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈಗಾಗಲೇ ರೈಲ್ವೆ ದಿಪಥ, ರೈಲು ನಿಲ್ದಾಣ ಅಭಿವೃದ್ಧಿ, ಹೊಸ ರೈಲ್ವೆ ಮಾರ್ಗಗಳ ನಿರ್ಮಾಣ ಆಗುತ್ತಿವೆ. ಇದೀಗ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ 25 ಬೃಹತ್ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಇದರಲ್ಲಿ ರಾಜ್ಯಕ್ಕೂ ಬಂಪರ್ ಸಿಕ್ಕಿದೆ.
''ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಮಹಾಕ್ರಾಂತಿ'' ಎಂದಿರುವ ಕರ್ನಾಟಕ ಬಿಜೆಪಿ ಹೊಸ ರೈಲ್ವೆ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದ್ದಲ್ಲದೇ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಇಚ್ಛೆ ಇದಿಯಾ? ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ನೀಡುವುದಕ್ಕೆ ನಿರ್ಧರಿಸಿರುವ ಪ್ರಧಾನಿ ಮೋದಿಯವರ ಸರ್ಕಾರ, ಕರುನಾಡಲ್ಲಿ ರೈಲ್ವೆ ಸಂಪರ್ಕ ಜಾಲವನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಬರೋಬ್ಬರಿ 42,517 ಕೋಟಿ ರೂಪಾಯಿ ವೆಚ್ಚದ 3264 ಕಿಲೋ ಮೀಟರ್ ಉದ್ದದ 25 ಬೃಹತ್ ರೈಲ್ವೆ ಯೋಜನೆಗಳಿಗೆ ಕೇಂದ್ರವು ಮಂಜೂರಾತಿ ನೀಡಿದೆ. ಇದರಿಂದ ಕರ್ನಾಟಕ ರಾಜ್ಯಕ್ಕೂ ಸಾಕಷ್ಟು ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಯೋಜನೆಗಳು ಸದ್ಭಳಕೆ ಆಗಬೇಕು ಎಂದು ಬಿಜೆಪಿ ಆಶಿಸಿದೆ.
ಬೃಹತ್ ಯೋಜನೆಗಳ ಮೂಲಕ ರಾಜ್ಯದ ಮೂಲೆ ಮೂಲೆಗೂ ರೈಲು ಸಂಪರ್ಕ ಕಲ್ಪಿಸುವ ದಶಕಗಳ ಕನಸು ನನಸಾಗಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇತ್ತ ಕರ್ನಾಟಕದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂದು ದೂರಿದೆ.
ಹೊಸ ರೈಲು ಮಾರ್ಗಗಳು ಯೋಜನೆಗಳು, ಪಟ್ಟಿ
ಹೆಜ್ಜಾಲ-ಚಾಮರಾಜನಗರ ಹೊಸಮಾರ್ಗ ಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮಾತ್ರ ಈ ರೈಲ್ವೆ ಯೋಜನೆಗೆ ಒಪ್ಪಿಗೆ ಕೊಡುತ್ತಿಲ್ಲ.! ಹಾಗೆಯೇ ಮೈಸೂರು-ಕುಶಾಲನಗರ, ಬೆಂಗಳೂರು-ಸತ್ಯಮಂಗಲ ರೈಲು ಯೋಜನೆಗಳಿಗೂ ಸಹ ರಾಜ್ಯ ಸರ್ಕಾರ 'ರೆಡ್ ಸಿಗ್ನಲ್' ನೀಡಿದೆ. ಸಾರ್ವಜನಿಕರಿಗೆ ಉಪಯೋಗವಾಗುವ ಈ ಯೋಜನೆಗಳಿಗೆ ಕರ್ನಾಟಕ ತನ್ನ ಪಾಲಿನ ಹಣಕಾಸು ನೀಡಬೇಕು. ಅಗತ್ಯ ಭೂಮಿ ಒದಗಿಸಬೇಕು. ಅದನ್ನು ಮಾಡದೇ ಕಾಂಗ್ರೆಸ್ ಸರ್ಕಾರ ಕನ್ನಡಿಗರ ರೈಲ್ವೆ ಕನಸಿಗೆ ಮಣ್ಣೆರಚಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇದೆಯಾ.?
ಕೇಂದ್ರದ ಅನುದಾನದ ವಿಷಯದಲ್ಲಿ ಸದಾ ಕೊಂಕು ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮಂಜೂರು ಮಾಡಿರುವ 25 ರೈಲ್ವೆ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಇಚ್ಛಾಶಕ್ತಿ ಇದೆಯಾ.? ಅಥವಾ ಭೂಮಿ, ರಾಜ್ಯದ ಪಾಲಿನ ಹಣ ಒದಗಿಸಲಾಗದೆ ಕನ್ನಡಿಗರ ರೈಲ್ವೆ ಕನಸಿಗೆ ಕೊಳ್ಳಿಯಿಡುವ ಸಂಚು ಮನಸ್ಸಿನಲ್ಲಿ ಸಿದ್ಧವಾಗಿದೆಯಾ? ಎಂದು ಪ್ರಶ್ನಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಥವಾ ಸಿಎಂ ಸಿದ್ದರಾಮಯ್ಯ ಅವರು ಏನು ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕಿದೆ.
ಈಗಾಗಲೇ ತುಮಕೂರು-ದಾವಣಗೆರೆ-ಚಿತ್ರದುರ್ಗ, ಗದಗ-ತೋರಣಗಲ್ಲು ಭಾಗದಲ್ಲಿ ದ್ವಿಪಥ ನಿರ್ಮಾಣವಾಗುತ್ತಿದೆ. ಗದಗ-ಯಲವಿಗಿ ರೈಲು ಮಾರ್ಗ ಸೇರಿದಂತೆ ಕೆಲವು ಹೊಸ ರೈಲು ಮಾರ್ಗ ಪ್ರಸ್ತಾವನೆ ಇತ್ತು. ಅದಕ್ಕೆಲ್ಲ ಕೇಂದ್ರ ಸಿಹಿ ಸುದ್ದಿ ನೀಡಿದೆ.












Click it and Unblock the Notifications