ಕೆಎಂಎಫ್ ಮಾದರಿಯಲ್ಲಿ ಮಾಂಸ ಮಾರಾಟ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ
ಕರ್ನಾಟಕ ಸರ್ಕಾರವು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಹಾಲಿನ ಉತ್ಪನ್ನಗಳ ಮಾದರಿಯಲ್ಲಿ ರಾಜ್ಯಾದ್ಯಂತ ತನ್ನ ಮಳಿಗೆಗಳ ಮೂಲಕ ಪ್ಯಾಕ್ ಮಾಡಿದ ಕುರಿ ಮತ್ತು ಮೇಕೆ ಮಾಂಸವನ್ನು ಸಮರ್ಪಕ ಬೆಲೆಯಲ್ಲಿ ಮಾರಾಟ ಮಾಡಲು ಚಿಂತನೆ ನಡೆಸಿದೆ.
ಪಶುಸಂಗೋಪನಾ ಇಲಾಖೆಯಡಿ ಈ ಯೋಜನೆ ಜಾರಿ ಮಾಡಲು ಉದ್ದೇಶಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಮಾಡಲಾಗಿದೆ.
ನವದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯೂ ಆಗಿರುವ ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ಈ ಬಗ್ಗೆ ಮಾತನಾಡಿ, ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಚೀಲನಹಳ್ಳಿಯಲ್ಲಿ ಹೈಟೆಕ್ ಕಸಾಯಿಖಾನೆಯ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಖಾಸಗಿ ಏಜೆನ್ಸಿ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಕಸಾಯಿಖಾನೆ ಜನವರಿ ವೇಳೆಗೆ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ ಎಂದರು.

ಗುಣಮಟ್ಟದ ಮಾಂಸ ಮಾರಾಟ
ಯೋಜನೆಯ ಕುರಿತು ವಿವರಿಸಿದ ಜಯಚಂದ್ರ, ರೈತರು ತಮ್ಮ ಕುರಿ ಮತ್ತು ಮೇಕೆಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಮತ್ತು ಜನರಿಗೆ ಗುಣಮಟ್ಟದ ಮಾಂಸವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ರೈತರಿಂದ ನೇರವಾಗಿ ಪ್ರಾಣಿಗಳನ್ನು ಖರೀದಿಸಲಾಗುತ್ತದೆ. ಇದು ಅವರ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಎಂಎಫ್‌ನ ನಂದಿನಿ ಮಾದರಿಯಲ್ಲಿ ಮಾಂಸದ ಬ್ರಾಂಡ್ ನಿರ್ಮಿಸಲು ಪಶುಸಂಗೋಪನ ಇಲಾಖೆ ಶ್ರಮಿಸಲಿದೆ ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕುರಿ ಮತ್ತು ಮೇಕೆ ಸಾಕುವ ರೈತರು ತಮ್ಮ ಪ್ರಾಣಿಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ. ಈ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶ ಹೊಂದಿದ್ದೇವೆ. ಮಾಂಸ ಮಾರಾಟ ಮಳಿಗೆ ಸ್ಥಾಪನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಕುರಿ ಮತ್ತು ಮೇಕೆ ಚರ್ಮದಿಂದ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನೂ ಸರ್ಕಾರ ಹೊಂದಿದೆ. ಇಲಾಖೆಯ ಅಧಿಕಾರಿಗಳನ್ನು ತಮಿಳುನಾಡು ಮತ್ತು ಕೋಲ್ಕತ್ತಾದ ಅಂಬೂರ್‌ಗೆ ಕಳುಹಿಸಲಾಗುವುದು, ಅಲ್ಲಿ ಕುರಿ ಮತ್ತು ಮೇಕೆ ಚರ್ಮವನ್ನು ಬಳಸಿ ಚರ್ಮ ಮತ್ತು ಇತರ ಉತ್ಪನ್ನಗಳನ್ನು ಅಧ್ಯಯನ ಮಾಡಲಿದ್ದಾರೆ ಎಂದು ಹೇಳಿದರು.












Click it and Unblock the Notifications