Karnataka Rains: ಇಂದು ಈ ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್: 5 ದಿನದ ಹವಾಮಾನ ವರದಿ
ಬೆಂಗಳೂರು, ಅಕ್ಟೋಬರ್ 30: ಚಂಡಮಾರುತ ಮೊಂಥಾ ಕರಾವಳಿ ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿದ್ದಂತೆ ಹಿಂಗಾರು ಮಳೆಯ ಆರ್ಭಟ ಕರ್ನಾಟಕದಲ್ಲಿ ಕಡಿಮೆ ಆಗಿದೆ. ಎರಡು ವಾರಗಳಿಂದ ಅಬ್ಬರಿಸಿದ್ದ ಮಳೆ ಕ್ರಮೇಣ ಕಡಿಮೆ ಆಗಿದೆ. ಒಳನಾಡು ಜಿಲ್ಲೆಗಳಲ್ಲಿ ಮಾತ್ರವೇ ಸಾಧಾರಣದಿಂದ ಭಾರೀ ಮಳೆ ಅಂದರೆ ಗರಿಷ್ಠ 115 ಮಿಲಿ ಮೀಟರ್ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವೈಪರೀತ್ಯಗಳು, ಮೊಂಥಾ ಚಂಡಮಾರುತ ಆರ್ಭಟಕ್ಕೆ ತೆಲಂಗಾಣ, ಆಂಧ್ರ ಪ್ರದೇಶ ಅಕ್ಷರಶಃ ನಲುಗಿದೆ. ಒಂದು ಸಾವು ವರದಿಯಾಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆ. ಇತ್ತ ಅದರ ಪ್ರಭಾವದಿಂದ ಕರ್ನಾಟಕದ ವಿವಿಧ ಆಗುತ್ತಿದ್ದ ಭಾರೀ ಮಳೆಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಕೇವಲ ಮೂರು ಒಳನಾಡು ಜಿಲ್ಲೆಗಳಿಗೆ ಮಾತ್ರ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸಂಭವವಿದೆ ಎಂದು ಐಎಂಡಿ ತಿಳಿಸಿದೆ.

ಭಾರೀ ಮಳೆ ಯೆಲ್ಲೋ ಅಲರ್ಟ್
ಮುಂದಿನ 05 ದಿನಗಳ ಪೈಕಿ ಇಂದು ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ಜೋರು ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಮುರು ದಿನ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಹಗುರದಿಂದ ಸಾಮಾನ್ಯ ಮಳೆ ಆಗಬಹುದು. ಗದಗ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ ಭಾಗಗಳಲ್ಲಿ ಚದುರಿದಂತೆ ಮಳೆ ನಿರೀಕ್ಷೆ ಇದೆ. ಇದರ ಹೊರತು ಕರ್ನಾಟಕದ ಯಾವ ಭಾಗದಲ್ಲಿ ಹಿಂಗಾರು ಮಳೆಯ ಸಕ್ರಿಯವಾಗಿಲ್ಲ ಎಂದು ಇಂದಿನ ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ.
ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ತಾಪಮಾನ
ಇನ್ನೂ ರಾಜ್ಯದ ಗರಿಷ್ಠ ತಾಪಮಾನದ ಜಿಲ್ಲೆಗಳನ್ನು ನೋಡುವುದಾದರೆ, ಕಾರವಾರದಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 32, ಮಂಗಳೂರು 32 ಡಿಗ್ರಿ ಸೆಲ್ಸಿಯಸ್, ಕಲಬುರಗಿ 32.6 ಡಿಗ್ರಿ ಸೆಲ್ಸಿಯಸ್, ರಾಯಚೂರು 31 ಡಿಗ್ರಿ ಸೆಲ್ಸಿಯಸ್, ವಿಜಯಪುರ (ತಿಡಗುಂಡಿ) ಮತ್ತು ಹಾವೇರಿಯಲ್ಲಿ 30 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 30 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ಏರ್‌ಪೋರ್ಟ್, ಚಿತ್ರದುರ್ಗ, ಕೊಪ್ಪಳ, ಧಾರವಾಡದಲ್ಲಿ, ಬೀದರ್ ಮತ್ತು ದಾವಣಗೆರೆಯಲ್ಲಿ ತಲಾ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.












Click it and Unblock the Notifications