SSLC, PUC ಪರೀಕ್ಷೆಗೆ ನೋಂದಣಿ ಶುರು: ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ಪೋಷಕರ ತೀವ್ರ ಆಕ್ರೋಶ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEAB) 2027ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಯನ್ನ ಅಧಿಕೃತವಾಗಿ ಶುರು ಮಾಡಿದೆ.

ಹೊಸದಾಗಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು, ಪುನರಾವರ್ತಿತ ಅಭ್ಯರ್ಥಿಗಳು (ರಿಪೀಟರ್ಸ್) ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಮಂಡಳಿಯು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದು, ನವೆಂಬರ್ 11ರವರೆಗೆ ಕಾಲಾವಕಾಶ ನೀಡಲಾಗಿದೆ.

Karnataka SSLC and PUC Exam 2027 Registration Begins Massive Outrage Over SSLC Exam Fee Hike

ಒಂದೆಡೆ ನೋಂದಣಿ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದ್ದರೆ, ಮತ್ತೊಂದೆಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನ ಏರಿಕೆ ಮಾಡಿರುವುದು ಪೋಷಕರು ಮತ್ತು ವಿದ್ಯಾರ್ಥಿಗಳ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪಿಯುಸಿ ಪರೀಕ್ಷೆ ನೋಂದಣಿ ಪ್ರಕ್ರಿಯೆ

ಈ ಬಾರಿಯ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನ ನೋಂದಾಯಿಸುವ ಸಂಪೂರ್ಣ ಜವಾಬ್ದಾರಿಯನ್ನ ಶಾಲಾ ಮುಖ್ಯ ಶಿಕ್ಷಕರು ಮತ್ತು ಕಾಲೇಜಿನ ಪ್ರಾಂಶುಪಾಲರಿಗೆ ನೀಡಲಾಗಿದೆ. ಅವರು ತಮ್ಮ ಶಾಲಾ ಅಥವಾ ಕಾಲೇಜಿನ ಅಧಿಕೃತ ಲಾಗಿನ್ ಐಡಿ ಬಳಸಿ ಆನ್‌ಲೈನ್ ಮೂಲಕ ನೋಂದಣಿಯನ್ನ ಪೂರ್ಣಗೊಳಿಸಬೇಕು.

ಈ ನೋಂದಣಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ನೇರವಾಗಿ ಶಿಕ್ಷಣ ಇಲಾಖೆಯ 'ಸ್ಯಾಟ್ಸ್'ತಂತ್ರಾಂಶದಿಂದ ಪಡೆಯಲಾಗುತ್ತದೆ.

ಆದ್ದರಿಂದ, ವಿದ್ಯಾರ್ಥಿಯ ಹೆಸರು, ತಂದೆ-ತಾಯಿಯ ಹೆಸರು, ಜನ್ಮ ದಿನಾಂಕ, ಜಾತಿ, ಪ್ರವರ್ಗ, ಧರ್ಮ, ಲಿಂಗ ಮತ್ತು ವ್ಯಾಸಂಗದ ಮಾಧ್ಯಮ ಸೇರಿದಂತೆ ಯಾವುದೇ ಪ್ರಮುಖ ವಿವರಗಳನ್ನ ಪರೀಕ್ಷಾ ನೋಂದಣಿ ವೇಳೆ ನೇರವಾಗಿ ಬದಲಾಯಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.

ಒಂದು ವೇಳೆ ವಿದ್ಯಾರ್ಥಿಗಳ ಈ ವಿವರಗಳಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ, ಶಾಲಾ ಆಡಳಿತ ಮಂಡಳಿಯು ಮೊದಲು ಸ್ಯಾಟ್ಸ್ ತಂತ್ರಾಂಶದಲ್ಲಿ ಆ ಮಾಹಿತಿಯನ್ನ ನವೀಕರಿಸಿ (ಅಪ್‌ಡೇಟ್), ಆನಂತರವಷ್ಟೇ ಪರೀಕ್ಷಾ ನೋಂದಣಿಯನ್ನ ಮುಂದುವರಿಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ: ಪೋಷಕರ ಆಕ್ರೋಶ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡಿದೆ. ಕಳೆದ ವರ್ಷವೂ ಇದೇ ರೀತಿ ಶುಲ್ಕವನ್ನ ಹೆಚ್ಚಿಸಲಾಗಿತ್ತು. ಕೇವಲ ಎರಡು ವರ್ಷಗಳ ಅಂತರದಲ್ಲಿ ಪರೀಕ್ಷಾ ಶುಲ್ಕವು ಬರೋಬ್ಬರಿ ಶೇ. 10.36ರಷ್ಟು ಏರಿಕೆಯಾಗಿದೆ. ಅಂದರೆ, ಕೇವಲ ಎರಡು ವರ್ಷಗಳ ಹಿಂದೆ 676 ರೂಪಾಯಿ ಇದ್ದ ಶುಲ್ಕ ಇದೀಗ 746 ರೂಪಾಯಿಗೆ ತಲುಪಿದೆ.

ಈಗಾಗಲೇ ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ ಸೇರಿದಂತೆ ಶೈಕ್ಷಣಿಕ ವೆಚ್ಚಗಳು ಗಗನಕ್ಕೇರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಈ ದಿಢೀರ್ ಶುಲ್ಕ ಹೆಚ್ಚಳ ನಿರ್ಧಾರವು ಆರ್ಥಿಕವಾಗಿ ಹಿಂದುಳಿದ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಭಾರೀ ಆರ್ಥಿಕ ಹೊರೆ ಹೊರಿಸಿದಂತಾಗಿದೆ.

ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗಂತೂ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಈ ಶುಲ್ಕ ಹೆಚ್ಚಳವನ್ನ ಹಿಂಪಡೆಯಬೇಕು ಎಂದು ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.

ಪರಿಷ್ಕೃತ ಪರೀಕ್ಷಾ ಶುಲ್ಕದ ಸಂಪೂರ್ಣ ವಿವರ

ಈ ಬಾರಿ ಮಂಡಳಿಯು ಬಿಡುಗಡೆ ಮಾಡಿರುವ ಪರಿಷ್ಕೃತ ದರಗಳ ಪ್ರಕಾರ, ಶಾಲಾ ವಿದ್ಯಾರ್ಥಿಗಳಿಗೆ ಈ ಹಿಂದೆ ಇದ್ದ 710 ರೂಪಾಯಿ ಶುಲ್ಕವನ್ನ 746 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಹೊಸದಾಗಿ ಪರೀಕ್ಷೆ ಬರೆಯುತ್ತಿರುವ ಖಾಸಗಿ ಅಭ್ಯರ್ಥಿಗಳ ಶುಲ್ಕವನ್ನು 248 ರೂಪಾಯಿಗಳಿಂದ 260 ರೂಪಾಯಿಗಳಿಗೆ ಏರಿಸಲಾಗಿದೆ.

ಅದೇ ರೀತಿ, ಪುನರಾವರ್ತಿತ (ರಿಪೀಟರ್ಸ್) ವಿದ್ಯಾರ್ಥಿಗಳಿಗೂ ಈ ಶುಲ್ಕದ ಬಿಸಿ ತಟ್ಟಿದೆ. ಒಂದು ವಿಷಯದ ಪರೀಕ್ಷೆ ಬರೆಯುವ ಪುನರಾವರ್ತಿತ ಅಭ್ಯರ್ಥಿಗಳಿಗೆ 448 ರೂಪಾಯಿ ಬದಲಾಗಿ 470 ರೂಪಾಯಿ, ಎರಡು ವಿಷಯಗಳಿಗೆ 559 ರೂ. ಬದಲಾಗಿ 587 ರೂ. ಹಾಗೂ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ಹಿಂದೆ ಇದ್ದ 752 ರೂ. ಶುಲ್ಕವನ್ನು 790 ರೂ.ಗಳಿಗೆ ಪರಿಷ್ಕರಿಸಲಾಗಿದೆ.

ಶಿಕ್ಷಣ ಇಲಾಖೆಯು ಪರೀಕ್ಷಾ ನೋಂದಣಿಗೆ ಚಾಲನೆ ನೀಡಿದ್ದರೂ, ಈ ಶುಲ್ಕ ಹೆಚ್ಚಳದ ವಿವಾದವು ಇದೀಗ ಮುನ್ನೆಲೆಗೆ ಬಂದಿದೆ. ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದನ್ನ ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+