ಎಸ್‌ಎಸ್‌ಎಲ್‌ಸಿ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 35 ಸಾವಿರ ರೂಪಾಯಿವರೆಗೆ ಪ್ರೋತ್ಸಾಹಧನ: ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ
ಬೆಂಗಳೂರು: ಪರಿಶಿಷ್ಟ ಜಾತಿಯ (SC) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನೀಡುವ 'ಪ್ರೋತ್ಸಾಹಧನ' ಯೋಜನೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ದಿನಾಂಕವನ್ನು 28-02-2026 ರವರೆಗೆ ವಿಸ್ತರಿಸಲಾಗಿದೆ.
ಇದರೊಂದಿಗೆ, ಯಾವ ಕೋರ್ಸ್‌ಗೆ ಎಷ್ಟು ಮೊತ್ತದ ಪ್ರೋತ್ಸಾಹಧನ ದೊರೆಯಲಿದೆ ಎಂಬ ಅಧಿಕೃತ ಪಟ್ಟಿಯನ್ನು ಇಲಾಖೆಯು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಯಾವ ಕೋರ್ಸ್‌ಗೆ ಎಷ್ಟು ಹಣ?
ವಿದ್ಯಾರ್ಥಿಗಳು ಗಳಿಸಿದ ಅಂಕಗಳು ಮತ್ತು ಅವರು ವ್ಯಾಸಂಗ ಮಾಡುತ್ತಿರುವ ಕೋರ್ಸ್‌ನ ಆಧಾರದ ಮೇಲೆ ಪ್ರೋತ್ಸಾಹಧನದ ಮೊತ್ತವನ್ನು ನಿಗದಿಪಡಿಸಲಾಗಿದೆ. ಇಲಾಖೆಯು ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ ವಿವರಗಳು ಹೀಗಿವೆ:
1.ಎಸ್‌ಎಸ್‌ಎಲ್‌ಸಿ (SSLC): ಶೇ. 60ರಿಂದ ಶೇ. 75ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 7,500 ರೂ. ನೀಡಲಾಗುತ್ತದೆ. ಹಾಗೆಯೇ ಶೇ. 75 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬರೋಬ್ಬರಿ 15,000 ರೂ. ಪ್ರೋತ್ಸಾಹಧನ ಸಿಗಲಿದೆ.
2.ಪಿಯುಸಿ ಮತ್ತು ಡಿಪ್ಲೊಮಾ: ದ್ವಿತೀಯ ಪಿಯುಸಿ ಅಥವಾ ಡಿಪ್ಲೊಮಾ ಕೋರ್ಸ್‌ನಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದವರಿಗೆ 20,000 ರೂ. ನೀಡಲಾಗುತ್ತದೆ.
3.ಪದವಿ: ಯಾವುದೇ ಪದವಿ ಕೋರ್ಸ್‌ಗಳನ್ನು (ಉದಾಹರಣೆಗೆ ಬಿ.ಎ, ಬಿ.ಕಾಂ, ಬಿ.ಎಸ್ಸಿ ಇತ್ಯಾದಿ) ಪೂರೈಸಿದ ವಿದ್ಯಾರ್ಥಿಗಳಿಗೆ 25,000 ರೂ. ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ.
4.ಸ್ನಾತಕೋತ್ತರ ಪದವಿ: ಎಂ.ಎ, ಎಂ.ಕಾಂ, ಎಂ.ಎಸ್ಸಿಯಂತಹ ಸ್ನಾತಕೋತ್ತರ ಪದವಿ ಪಡೆದವರಿಗೆ 30,000 ರೂ. ನೀಡಲಾಗುತ್ತದೆ.
5.ವೃತ್ತಿಪರ ಪದವಿಗಳು: ವೈದ್ಯಕೀಯ, ತಾಂತ್ರಿಕ, ಕೃಷಿ ಮತ್ತು ಪಶು ವೈದ್ಯಕೀಯ ಕೋರ್ಸ್‌ಗಳನ್ನು ಪೂರೈಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗರಿಷ್ಠ 35,000 ರೂ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
ಅರ್ಹತೆಗಳೇನು?
ಸಮಾಜ ಕಲ್ಯಾಣ ಇಲಾಖೆಯು ಸ್ಪಷ್ಟಪಡಿಸಿರುವಂತೆ, ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ (SC) ಸೇರಿರಬೇಕು. ಅತಿ ಮುಖ್ಯವಾಗಿ, ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿರಬೇಕು. ಇದು ಕಡ್ಡಾಯ ನಿಯಮವಾಗಿದ್ದು, ದ್ವಿತೀಯ ಪ್ರಯತ್ನದಲ್ಲಿ ಪಾಸಾದವರಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
1.ವೆಬ್‌ಸೈಟ್ ಮುಖಪುಟದಲ್ಲಿ 'Prize Money' ಲಿಂಕ್ ಕ್ಲಿಕ್ ಮಾಡಿ.
2.ನೋಂದಣಿ ಸಂಖ್ಯೆ ನಮೂದಿಸಿ.
3.ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಸಬ್‌ಮಿಟ್ ಮಾಡಿ.
ಗಮನಿಸಿ!
— ಸಮಾಜ ಕಲ್ಯಾಣ ಇಲಾಖೆ (@SWDGoK) February 7, 2026
ಎಸ್. ಎಸ್.ಎಲ್. ಸಿ ಹಾಗೂ ಮೆಟ್ರಿಕ್ ನಂತರದ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!
ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. (1/2)
ಕೊನೆಯ ದಿನಾಂಕ: 28/02/2026
ಲಿಂಕ್: https://t.co/HUTSqbfl0G… pic.twitter.com/fLQ0OyNMWX












Click it and Unblock the Notifications