ರಾಜ್ಯದಲ್ಲಿ ಹೊಸ ಕೋವಿಡ್ ಮಾರ್ಗಸೂಚಿ: ಸಣ್ಣ ಕೈಗಾರಿಕೆಗಳ ಕಥೆಯೇನು?
ಬೆಂಗಳೂರು, ಜ.4: ಕರ್ನಾಟಕ ರಾಜ್ಯಾದ್ಯಂತ 6ನೇ ತಾರೀಕಿನಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಕುರಿತು ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ (KASSIA) ಪ್ರತಿಕ್ರಿಯೆ ನೀಡಿದೆ.
ಕಾಸಿಯಾ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂಎಸ್‌ಎಂಇ) ಸ್ಥಿತಿ ಎಂಬ ಚಿಂತಿಸುತ್ತಿದೆ. ಪ್ರತಿದಿನ ಹೆಚ್ಚಳ ಆಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಂದಾಗಿ ರಾಜ್ಯ ಸರಕಾರ ಲಾಕ್‌ಡೌನ್ ಅಥವಾ ಇತರ ಕಠಿಣ ಕ್ರಮಗಳ ರೂಪದಲ್ಲಿ ಯಾವುದೇ ರೀತಿಯ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮನವಿ ಮಾಡಿತ್ತು.

ಕೊರೊನಾ 1ನೇ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಇಂತಹ ಸಮಸ್ಯೆಯಿಂದ ಪಾರಾಗಬೇಕಾದರೆ ಲಾಕ್‌ಡೌನ್ ಜಾರಿಗೊಳಿಸಬಾರದು ಎಂದು ಕಾಸಿಯಾ ಮನವಿ ಮಾಡಿದೆ.
ಕೈಗಾರಿಕೆಗಳನ್ನು ಮತ್ತು ಕಚ್ಚಾ ಸಾಮಗ್ರಿಗಳ ಮಳಿಗೆಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮುಚ್ಚುವ ಮತ್ತು ಕೈಗಾರಿಕೆಗಳಿಗೆ ಕೈಗಾರಿಕಾ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುವ ಬದಲು, ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಮಾಸ್ಕ್‌ಗಳನ್ನು ಧರಿಸುವುದು ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವತ್ತ ಸರಕಾರ ಗಮನಹರಿಸಬೇಕು ಎಂದು ಕಾಸಿಯಾ ಮನವಿ ಮಾಡಿತ್ತು.
ಹಿಂದಿನ ಲಾಕ್‌ಡೌನ್ ಪರಿಣಾಮದಿಂದ ಈಗಾಗಲೇ ಸಾಕಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಿವೆ. ಅಲ್ಲದೆ, ಪೂರೈಕೆ ಸರಪಳಿಗಳ ಕೊಂಡಿಗಳು ಕಳಚಿಕೊಳ್ಳಲಿರುವುದರಿಂದ ಉದ್ಯಮಗಳು ಸಂಪೂರ್ಣವಾಗಿ ನಾಶವಾಗುವುದಲ್ಲದೆ ಕಾರ್ಮಿಕರು ಶಾಶ್ವತವಾಗಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ. ಹಾಗಾಗಿ ಹಣ ಯಾವುದೇ ಸಮಯದಲ್ಲಿ ಆರ್ಥಿಕತೆಯ ಕುಸಿತ ಮರುಕಳಿಸಲಿದೆ ಎಂದು ಕಾಸಿಯಾ ತಿಳಿಸಿದೆ.
ಕೊರೊನಾ ನೂತನ ಮಾರ್ಗಸೂಚಿಗೆ ಸಂಬಂಧಿಸಿದ ಇತರ ತೀರ್ಮಾನಗಳೇನು?
* ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್ಲೈನ್ ತರಗತಿ ನಿಲ್ಲಿಸಲಾಗಿದೆ. ಶಾಲಾ- ಕಾಲೇಜುಗಳು ಆನ್ಲೈನ್ ವಿಧಾನದಲ್ಲಿ ನಡೆಯುತ್ತದೆ.
* ಕರ್ನಾಟಕ ರಾಜ್ಯಾದ್ಯಂತ 6ನೇ ತಾರೀಖಿನಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಇರುತ್ತದೆ.
* ವೀಕೆಂಡ್ ಕರ್ಫ್ಯೂ ವೇಳೆ ಆಹಾರ ವಸ್ತು, ಹೋಟೆಲ್ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
* ಸರ್ಕಾರಿ ಕಚೇರಿಗಳು, ಮಾಲ್ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ಚಿತ್ರಮಂದಿರ, ಮಾಲ್, ಬಾರ್, ಪಬ್ಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ (50:50 ನಿಯಮ) ಪ್ರವೇಶ ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಲಸಿಕೆ ಕಡ್ಡಾಯ ಆಗಿರಲಿದೆ.
* ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಡಬಲ್ ಡೋಸ್ ಕಡ್ಡಾಯ ಆಗಿರಲಿದೆ. ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ. ಅವರಿಗೂ 2 ಡೋಸ್ ಆಗಿರಬೇಕು.
* ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಕಡ್ಡಾಯ ಆಗಿರಲಿದೆ.
* ವಿದೇಶಿ ಪ್ರಯಾಣಿಕರ ಟ್ರ್ಯಾಕಿಂಗ್-ಟ್ರೇಸಿಂಗ್ ಬಲಪಡಿಸಲು ತೀರ್ಮಾನಿಸಲಾಗಿದೆ. ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಶಾಲಾ ಕಾಲೇಜು ರಜೆ ಬೆಂಗಳೂರಿಗೆ ಮಾತ್ರ ಅನ್ವಯ ಆಗುತ್ತದೆ. ಆದರೆ, ಉಳಿದ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ.












Click it and Unblock the Notifications