Siddaramaiah Government Cabinet Expansion: ಪ್ರಾತಿನಿಧ್ಯ ಸಿಗದ 9 ಜಿಲ್ಲೆಗಳ ಪಟ್ಟಿ
ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ಇಂದು ಪೂರ್ಣ ಪ್ರಮಾಣದಲ್ಲಿ ವಿಸ್ತರಣೆಗೊಂಡಿದೆ. ಒಂದು ವಾರದ ಹಿಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹತ್ತು ಮುಖಂಡರು ಪ್ರಮಾಣ ವಚನ ಸ್ವೀಕರಿಸಿದ್ದರು. ಶನಿವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 24 ನಾಯಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.
ಬುಧವಾರದಿಂದ ಸಂಪುಟ ವಿಸ್ತರಣೆಗೆ ಸರ್ಕಸ್ ನಡೆಯುತ್ತಾ ಇತ್ತು, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಎರಡು ಬಣಗಳ ನಡುವೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ವಿಚಾರದಲ್ಲಿ ಹಗ್ಗಜಗ್ಗಾಟ ನಡೆದಿದ್ದರಿಂದ ಶುಕ್ರವಾರ ರಾತ್ರಿಯ ಹೊತ್ತಿಗೆ 24 ಹೆಸರು ಅಂತಿಮಗೊಂಡು, ರಾಜ್ಯಪಾಲರ ಕಚೇರಿಗೆ ಹೋಯಿತು.

ಸಚಿವ ಸ್ಥಾನ ಪಕ್ಕಾ ಸಿಗುತ್ತೆ ಎಂದು ನಂಬಿದ್ದ ಕಾಂಗ್ರೆಸ್ಸಿನ ಕೆಲವು ನಿಷ್ಟಾವಂತ ಶಾಸಕರಿಗೆ ತೀವ್ರ ನಿರಾಸೆಯಾಗಿದೆ. ಅದರಲ್ಲಿ, ಬಿ.ಕೆ.ಹರಿಪ್ರಸಾದ್, ಆರ್.ವಿ.ದೇಶಪಾಂಡೆ, ಸಲೀಂ ಅಹ್ಮದ್, ತನ್ವೀರ್ ಸೇಠ್ ಮುಂತಾದವರಿದ್ದಾರೆ. ಜೊತೆಗೆ, ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ, ಕೆ.ಎಂ.ಶಿವಲಿಂಗೇ ಗೌಡ್ರಿಗೂ ಸ್ಥಾನ ಸಿಗಲಿಲ್ಲ.
ಸಿದ್ದರಾಮಯ್ಯನವರ ನೂತನ ಕ್ಯಾಬಿನೆಟ್ ನಲ್ಲಿ 22 ಜಿಲ್ಲೆಯ ಪ್ರತಿನಿಧಿಗಳು ಸಚಿವರಾದರೆ, ಒಂಬತ್ತು ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತವಾಗಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದ ಏಳು ನಾಯಕರು ಸಚಿವ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ, ಚಾಮರಾಜ ನಗರ
ಉಡುಪಿ, ದಕ್ಷಿಣ ಕನ್ನಡ, ಚಾಮರಾಜ ನಗರ, ವಿಜಯನಗರ, ಹಾವೇರಿ, ಕೋಲಾರ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯಿಂದ ಸಚಿವರಿಲ್ಲದಂತಾಗಿದೆ. ಅದರಲ್ಲಿ, ಉಡುಪಿಯ ಐದೂ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿರುವುದರಿಂದ ಅಲ್ಲಿ ಕಾಂಗ್ರೆಸ್ ಶಾಸಕರು ಇಲ್ಲ. ಇನ್ನು, ದಕ್ಷಿಣ ಕನ್ನಡ ಜಿಲ್ಲೆಯ ಯು.ಟಿ.ಖಾದರ್ ಅವರು ಸ್ಫೀಕರ್ ಆಗಿ ಆಯ್ಕೆಯಾಗಿದ್ದಾರೆ.
ಚಾಮರಾಜ ನಗರ ಜಿಲ್ಲೆಯ ಪುಟ್ಟರಂಗ ಶೆಟ್ಟಿ
ಚಾಮರಾಜ ನಗರ ಜಿಲ್ಲೆಯ ಪುಟ್ಟರಂಗ ಶೆಟ್ಟಿಯವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಕೊಡಗಿನ ಎರಡೂ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದ್ದರೂ, ಅವರಿಬ್ಬರೂ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾವೇರಿಯ ರುದ್ರಪ್ಪ ಲಮಾಣಿ ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದೆ. ಚಿಕ್ಕಮಗಳೂರಿನಲ್ಲಿ ನಾಲ್ಕು ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ.
ಕೋಲಾರದಲ್ಲೂ ಕಾಂಗ್ರೆಸ್ ಉತ್ತಮ ಪ್ರದರ್ಶನ
ಕೋಲಾರದಲ್ಲೂ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿತ್ತು, ಕೆ.ಎಚ್.ಮುನಿಯಪ್ಪನವರ ಪುತ್ರಿ ರೂಪಾ ಶಶಿಧರ್ ಅವರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಹಾಸನದಿಂದ ಶಿವಲಿಂಗೆ ಗೌಡ್ರಿಗೂ ಸಚಿವ ಸ್ಥಾನ ಸಿಗಲಿಲ್ಲ. ಜಾತಿವಾರು ಪ್ರಾತಿನಿಧ್ಯದ ದೃಷ್ಟಿಯಲ್ಲಿ ಅವಲೋಕಿಸಿದಾಗ ಲಿಂಗಾಯತ ಸಮುದಾಯಕ್ಕೆ ಎಂಟು, ಒಕ್ಕಲಿಗರಿಗೆ ಆರು ಮುಖಂಡರು ಸಚಿವರಾಗಿದ್ದಾರೆ.












Click it and Unblock the Notifications