ಕರ್ನಾಟಕದಲ್ಲಿ ಶೇ.93.79ರಷ್ಟು ಕೊವಿಡ್-19 ಸೋಂಕಿತರು ಗುಣಮುಖ
ಬೆಂಗಳೂರು, ನವೆಂಬರ್.04: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಈಗಾಗಲೇ ತಗ್ಗಿದೆ. ಕರ್ನಾಟಕವು ಕೊವಿಡ್-19 ಸೋಂಕು ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ದಿ ಬೆಸ್ಟ್ ಎನ್ನುವಂತೆ ಆಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ದೇಶದಲ್ಲಿ ಕೊವಿಡ್-19 ಗುಣಮುಖರ ಸಂಖ್ಯೆಗಿಂತಲೂ ರಾಜ್ಯದಲ್ಲಿ ಶೇಕಡಾವಾರು ಗುಣಮುಖರ ಸಂಖ್ಯೆಯು ಹೆಚ್ಚಾಗಿದೆ. ದೇಶದಲ್ಲಿ ಕೊರೊನಾವೈರಸ್ ಗುಣಮುಖರ ಶೇಕಡಾವಾರು ಪ್ರಮಾಣ ಶೇ.92.09ರಷ್ಟಿದೆ. ಆದರೆ ಕರ್ನಾಟಕದಲ್ಲಿ ಶೇಕಡಾವಾರು ಗುಣಮುಖರ ಪ್ರಮಾಣವು ಶೇ.93.79ರಷ್ಟಿದೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ದೇಶದ ಪ್ರಮುಖ ರಾಜ್ಯಗಳ ಪೈಕಿ ಅತಿಹೆಚ್ಚು ಕೊವಿಡ್-19 ಸೋಂಕು ತಪಾಸಣೆ ನಡೆಸಿದ ಪಟ್ಟಿಯಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 1,22,848 ಜನರಿಗೆ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಕೊವಿಡ್-19 ಗುಣಮುಖರೇ ಹೆಚ್ಚು:
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 2756 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು ಈಗಾಗಲೇ 832396ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಂದು ದಿನದಲ್ಲಿ 26 ಮಂದಿ ಪ್ರಾಣ ಬಿಟ್ಟಿದ್ದರೆ, ಇದೇ 24 ಗಂಟೆಗಳಲ್ಲಿ 7140 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಕೊವಿಡ್-19 ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದವರ ಸಂಖ್ಯೆಯು 780735ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾವೈರಸ್ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ ಒಂದು ಹಂತದಲ್ಲಿ 832396ರ ಗಡಿ ದಾಟಿದೆ. ಆದರೆ ಈ ಪೈಕಿ ರಾಜ್ಯದಲ್ಲಿ ಬಾಕಿ ಉಳಿದಿರುವ ಸಕ್ರಿಯ ಪ್ರಕರಣಗಳು ಮಾತ್ರ ಕೇವಲ 40395ರಷ್ಟಿದೆ. ಅಂದರೆ ಶೇ.93.79ರಷ್ಟು ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಸಚಿವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications