RTE ಉಚಿತ ಶಿಕ್ಷಣ: ಬಜೆಟ್‌ನಲ್ಲಿ ಘೋಷಣೆಯಾದರೂ ಆದೇಶವಿಲ್ಲ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ಶುಲ್ಕದ ಬರೆ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ 9 ಮತ್ತು 10ನೇ ತರಗತಿಗೂ ಶಾಲೆಯಲ್ಲಿ ಉಚಿತ ಶಿಕ್ಷಣ ಮುಂದುವರಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ 2026-27ನೇ ಸಾಲಿನ ಬಜೆಟ್‌ನಲ್ಲಿ ಭರ್ಜರಿಯಾಗಿ ಘೋಷಿಸಿತ್ತು. ಆದರೆ, ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರೂ ಈ ಕುರಿತು ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಸರ್ಕಾರದ ಈ ವಿಳಂಬ ಧೋರಣೆಯನ್ನು ಬಂಡವಾಳವಾಗಿಸಿಕೊಂಡಿರುವ ಖಾಸಗಿ ಶಾಲೆಗಳು, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿಗೆ ಇಳಿದಿವೆ ಎಂಬ ಗಂಭೀರ ಆರೋಪಗಳು ಪೋಷಕರಿಂದ ಕೇಳಿಬರುತ್ತಿವೆ.
ಶಿಕ್ಷಣ ಹಕ್ಕು ಕಾಯ್ದೆ-2009ರ ಅನ್ವಯ 1 ರಿಂದ 8ನೇ ತರಗತಿಯವರೆಗೆ ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಮೀಸಲಾತಿಯಡಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. 8ನೇ ತರಗತಿ ಮುಗಿಸಿದ ನಂತರ ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಭಾರಿ ಮೊತ್ತದ ಶುಲ್ಕ ಕಟ್ಟಲಾಗದೆ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸುವುದನ್ನು ತಪ್ಪಿಸಲು ಸರ್ಕಾರ ಈ ಬಾರಿ ಆರ್‌ಟಿಇ ವ್ಯಾಪ್ತಿಯನ್ನು 9 ಮತ್ತು 10ನೇ ತರಗತಿಗೂ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿತ್ತು. ಇದು ಪೋಷಕರಲ್ಲಿ ಭಾರಿ ನಿರೀಕ್ಷೆ ಮತ್ತು ಹರ್ಷ ಮೂಡಿಸಿತ್ತು. ಆದರೆ, ಘೋಷಣೆ ಕೇವಲ ಬಜೆಟ್ ಪುಸ್ತಕಕ್ಕೆ ಸೀಮಿತವಾಗಿದ್ದು, ಶಿಕ್ಷಣ ಇಲಾಖೆಯು ಈ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿಗಳಿಗೆ ಯಾವುದೇ ಅಧಿಕೃತ ಸುತ್ತೋಲೆ ಅಥವಾ ಮಾರ್ಗಸೂಚಿಯನ್ನು ರವಾನಿಸಿಲ್ಲ.

ಇದರ ನೇರ ಬಿಸಿ ಈಗ ಪೋಷಕರಿಗೆ ತಟ್ಟುತ್ತಿದೆ. ಬೆಂಗಳೂರಿನ ಕೆಂಗೇರಿ ವ್ಯಾಪ್ತಿಯ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ತಮ್ಮ ಮಗಳನ್ನು ಆರ್‌ಟಿಇ ಅಡಿ ಓದಿಸುತ್ತಿರುವ ಪ್ರಕಾಶ್ ಎಂಬುವವರು ತಮ್ಮ ಅಳಲು ತೋಡಿಕೊಂಡಿದ್ದಾರೆ. "ನನ್ನ ಮಗಳು ಇದೇ ಶಾಲೆಯಲ್ಲಿ ಆರ್‌ಟಿಇ ಅಡಿ 8ನೇ ತರಗತಿ ಪಾಸ್ ಆಗಿ, ಈ ವರ್ಷ 9ನೇ ತರಗತಿಗೆ ಕಾಲಿಟ್ಟಿದ್ದಾಳೆ. ಆದರೆ, ಶಾಲಾ ಆಡಳಿತ ಮಂಡಳಿಯು ಆಕೆಯನ್ನು 9ನೇ ತರಗತಿಗೆ ದಾಖಲಿಸಿಕೊಳ್ಳಲು ನಿರಾಕರಿಸುತ್ತಿದೆ.
'ಆರ್‌ಟಿಇ ವಿಸ್ತರಣೆ ಕುರಿತು ಸರ್ಕಾರದಿಂದ ನಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಹೀಗಾಗಿ ನಿಮ್ಮ ಮಗಳು 9ನೇ ತರಗತಿಯಲ್ಲಿ ನಮ್ಮ ಶಾಲೆಯಲ್ಲೇ ಮುಂದುವರಿಯಬೇಕಾದರೆ 1.5 ಲಕ್ಷ ರೂ. ಶುಲ್ಕ ಪಾವತಿಸಲೇಬೇಕು' ಎಂದು ಆಡಳಿತ ಮಂಡಳಿ ಪೀಡಿಸುತ್ತಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟುವುದು ಅಸಾಧ್ಯದ ಮಾತು ಎನ್ನುವುದು ಅವರ ಅಳಲಾಗಿದೆ.
ಇನ್ನೊಂದೆಡೆ ಶಾಲಾ ಆಡಳಿತ ಮಂಡಳಿಗಳ ವಾದವೇ ಬೇರೆ. "ಸರ್ಕಾರದಿಂದ ಅಧಿಕೃತ ಸುತ್ತೋಲೆ ಬರುವವರೆಗೆ ನಾವು ಯಾವುದೇ ವಿದ್ಯಾರ್ಥಿಗೆ ಉಚಿತ ಪ್ರವೇಶ ನೀಡಲು ಸಾಧ್ಯವಿಲ್ಲ. ಸರ್ಕಾರ ನಿಯಮಾವಳಿ ರೂಪಿಸಿ, ಈ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯ ಕುರಿತು ಸ್ಪಷ್ಟ ಭರವಸೆ ನೀಡದಿದ್ದರೆ, ಆ ಆರ್ಥಿಕ ಹೊರೆಯನ್ನು ನಾವೇ ಭರಿಸಬೇಕಾಗುತ್ತದೆ" ಎನ್ನುತ್ತವೆ ಖಾಸಗಿ ಶಾಲೆಗಳು.
ಆರ್‌ಟಿಇ ಅಡಿ 9 ಮತ್ತು 10ನೇ ತರಗತಿಗೆ ಉಚಿತ ಶಿಕ್ಷಣ ನೀಡುವ ಅಧಿಕೃತ ಆದೇಶವನ್ನು ತುರ್ತಾಗಿ ಹೊರಡಿಸಬೇಕು. ಇಲ್ಲವಾದಲ್ಲಿ, ಶುಲ್ಕ ಕಟ್ಟಲಾಗದ ಸಾವಿರಾರು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂಬುದು ಸಾರ್ವಜನಿಕರ ಆತಂಕವಾಗಿದೆ.












Click it and Unblock the Notifications