ಒಂದೇ ದಿನ 24,500 ಆಸ್ತಿ ನೋಂದಣಿ: ₹244 ಕೋಟಿ ಆದಾಯ!
ರಾಜ್ಯ ಸರ್ಕಾರಕ್ಕೆ ಕಂದಾಯ ಇಲಾಖೆಯಿಂದ ಭರ್ಜರಿ ಆದಾಯ ಬಂದಿದೆ. ಅದರಲ್ಲೂ ಒಂದೇ ದಿನ ಬರೋಬ್ಬರಿ 24,500 ಆಸ್ತಿ ನೋಂದಣಿ ಮೂಲಕ ₹244 ಕೋಟಿ ಆದಾಯವು ರಾಜ್ಯ ಸರ್ಕಾರದ ಬೊಕ್ಕಸ ಸೇರಿದೆ. ಈ ಮೂಲಕ ಕಂದಾಯ ಸಚಿವರು ಇಲಾಖೆಯಲ್ಲಿ ಕಳೆದ ಕೆಲ ತಿಂಗಳಿಂದ ತಂದಿರುವ ಮಹತ್ವದ ಬದಲಾವಣೆ ಫಲ ನೀಡಿದಂತೆ ಕಾಣ್ತಿದೆ.
ಇನ್ನು ಬುಧವಾರ ಒಂದೇ ದಿನ ಆಸ್ತಿ ನೋಂದಣಿ ಸೇರಿದಂತೆ 26,058 ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 311 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಮುದ್ರಾಂಕ & ನೋಂದಣಿ ಇಲಾಖೆ ಇತಿಹಾಸದಲ್ಲೇ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿ ನೋಂದಣಿ ಮತ್ತು ದಸ್ತಾವೇಜು ಪ್ರಕ್ರಿಯೆ ನಡೆದಿರುವುದು ಹೊಸ ದಾಖಲೆ. ಹಾಗೇ ಗರಿಷ್ಠ ಶುಲ್ಕ ಸಂಗ್ರಹ ಕೂಡ ಹೊಸ ದಾಖಲೆ ಸೃಷ್ಟಿಸಿದೆ. ಸೋಮವಾರವಷ್ಟೇ 15,936 ನೋಂದಣಿ ದಸ್ತಾವೇಜು ಪ್ರಕ್ರಿಯೆ ನಡೆದಿದ್ದು 158.28 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

ಕಾವೇರಿ-2 ತಂತ್ರಾಂಶದ ಫಲಿತಾಂಶ!
ಸೆಪ್ಟೆಂಬರ್ 22 ರಂದು 12,955 ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಮೂಲಕ 130.87 ಕೋಟಿ ರೂ. ಮತ್ತು ಸೆ.25ರಂದು 158.28 ಕೋಟಿ ರೂ. ಹಣ ಸರ್ಕಾರದ ಬೊಕ್ಕಸ ಸೇರಿದೆ. ನೋಂದಣಿ ಸೇರಿ ಇತರೆ ಪ್ರಕ್ರಿಯೆಗೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ಆಸ್ತಿದಾರರೇ ಬಯಸಿದ ದಿನ & ಸಮಯಕ್ಕೆ ಆಸ್ತಿ ನೋಂದಣಿ ಮಾಡಿಕೊಳ್ಳುವ, ಆನ್‌ಲೈನ್ ಮೂಲಕ ಶುಲ್ಕ ಪಾವತಿ ವ್ಯವಸ್ಥೆಯಿರುವ 'ಕಾವೇರಿ- 2' ತಂತ್ರಾಂಶ ಈಗಾಗಲೇ ಅಳವಡಿಕೆಯಾಗಿದೆ. ಇದೇ ಕಾರಣಕ್ಕೆ ಆಸ್ತಿ ನೋಂದಣಿ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ.
ವಿರೋಧದ ನಡುವೆ ಯಶಸ್ವಿ!
ರಾಜ್ಯದ 256 ಉಪನೋಂದಣಿ ಕಚೇರಿಗಳಲ್ಲಿ ಜೂ.25ರಿಂದ ಪೂರ್ಣ ಪ್ರಮಾಣದಲ್ಲಿ ಸುಧಾರಿತ ತಂತ್ರಾಂಶದ ಅಡಿ ನೋಂದಣಿ, ದಸ್ತಾವೇಜು ನಡೆದಿವೆ. ಒಂದೇ ದಿನ ಗರಿಷ್ಠ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಯಶಸ್ವಿಯಾಗಿ ನಡೆಸುವ ಮೂಲಕ ತಂತ್ರಾಂಶ ಗರಿಷ್ಠ ಕಾರ್ಯಕ್ರಮತೆ ಸಾಬೀತುಪಡಿಸುತ್ತಿದೆ. ಕಾವೇರಿ-2 ತಂತ್ರಾಂಶದ ಬಗ್ಗೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದರಲ್ಲಿರುವ ಸಮಸ್ಯೆ ಕುರಿತು ಸಾಕಷ್ಟು ದೂರುಗಳೂ ಇಲಾಖೆಗೆ ಬಂದಿದ್ದವು. ಇದೀಗ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸಿದ್ದು, ಕಾವೇರಿ-2 ತಂತ್ರಾಂಶ ಸಾಕಷ್ಟು ಗಮನ ಸೆಳೆದಿದೆ.
ಮತ್ತೊಂದು ಕಡೆ ಕಾವೇರಿ-2 ತಂತ್ರಾಂಶದ ಸಹಾಯದಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೇ ಶೀಘ್ರ ಮತ್ತು ಪಾರದರ್ಶಕವಾಗಿ ನೋಂದಣಿ ಪ್ರಕ್ರಿಯೆಗಳು ಮುಗಿಯುತ್ತಿವೆ ಎಂಬುದು ಕೂಡ ಗಮನಾರ್ಹ. ಈ ಮೂಲಕ ಸರ್ಕಾರಕ್ಕೂ ಆದಾಯ ಹೆಚ್ಚುತ್ತಿದ್ದು, ಜನರಿಗೂ ಸರಳ & ಸುಲಭ ಸೇವೆಯ ಜೊತೆಗೆ ಸಮಯವೂ ಉಳಿಯುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಆದಾಯ ಬರುವ ನಿರೀಕ್ಷೆ ಇದೆ.












Click it and Unblock the Notifications