Rent Rules: ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ; ಬಾಡಿಗೆ ನಿಯಮಗಳಲ್ಲಿ ಏನೆಲ್ಲ ಬದಲಾವಣೆ?
ರಾಜ್ಯ ಸರ್ಕಾರವು ಬಾಡಿಗೆದಾರರಿಗೆ ನೆಮ್ಮದಿಯ ಸುದ್ದಿ ನೀಡಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ-2025ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇಂದು ಎಲ್ಲೆಡೆ ಬಾಡಿಗೆ ಮನೆಗಳು ಹೆಚ್ಚಾಗಿದ್ದು, ಬಾಡಿಗೆದಾರರು ಹಾಗೂ ಮನೆ ಮಾಲೀಕರ ನಡುವೆ ಘರ್ಷಣೆಗಳು, ಕಾನೂನು ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಈ ವಿಧೇಯಕ ಅಂಗೀಕಾರಗೊಂಡಿದ್ದು, ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಕೆಲ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಈ ತಿದ್ದುಪಡಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇಲ್ಲಿವರೆಗೆ ಕರಾರು ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆಯ ಬದಲಾಗಿ ಹೆಚ್ಚಿನ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ. ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿ ಶಿಕ್ಷೆಯ ರೂಪದಲ್ಲಿ ದಂಡದ ಮೊತ್ತ ಹೆಚ್ಚಿಸಿ, ಜೈಲಿಗೆ ಹೋಗುವ ಅಂಶವನ್ನು ತೆಗೆದುಹಾಕಲಾಗಿದೆ ಎಂದು ವಿವರಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಈ ವಿಧೇಯಕವನ್ನು ಸದನದ ಸದಸ್ಯರ ಚರ್ಚೆಗೆ ಮುಂದಿಟ್ಟು ವಿವರಣೆ ನೀಡಿದರು. ಇದೊಂದು ಸರಳ ವಿಧೇಯಕವಾಗಿದ್ದು, ಇದರಲ್ಲಿರುವುದು ದೇಶದ ಹಳೆಯ ಕಾನೂನು. ಬಹುತೇಕ ರಾಜ್ಯಗಳಲ್ಲಿ ಹೋಲಿಕೆ ಇರುವ ಕಾನೂನು. ಈ ಹಿಂದೆ ಕೇಂದ್ರ ಸರ್ಕಾರ ಮಾದರಿ ವಿಧೇಯಕವನ್ನು ರೂಪಿಸಿದ ನಂತರ ಅದನ್ನು ಎಲ್ಲ ರಾಜ್ಯಗಳೂ ಒಂದೇ ಮಾದರಿಯಲ್ಲಿ ಅಳವಡಿಸಿಕೊಂಡಿದ್ದವು. ಆದರೆ ಪ್ರಸ್ತುತ ಈ ವಿಧೇಯಕದಲ್ಲಿ ಕೆಲವು ಸರಳ ತಿದ್ದುಪಡಿಗಳನ್ನು ತರಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಮೂಲ ವಿಧೇಯಕದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಆದರೆ, ಇಂತಹ ಸಣ್ಣಪುಟ್ಟ ತಪ್ಪಿಗೆ ಜೈಲು ಶಿಕ್ಷೆ ಸರಿಯಲ್ಲ ಎಂಬ ಚರ್ಚೆ ದೇಶದಾದ್ಯಂತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ತಿದ್ದುಪಡಿಯ ಕರಡನ್ನು ಸಿದ್ದಪಡಿಸಿ ನಮಗೆ ಕಳಿಸಿಕೊಟ್ಟಿದೆ. ನಾವು ಈ ತಿದ್ದುಪಡಿ ಮೂಲಕ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಶಿಕ್ಷೆಯ ರೂಪದಲ್ಲಿ ದಂಡ ಶುಲ್ಕ ಅಧಿಕವಾಗಬಹುದು ಆದರೆ, ಜೈಲಿಗೆ ಹೋಗುವ ಅಂಶವನ್ನು ತೆಗೆದುಹಾಕಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಾಡಿಗೆದಾರರ ಮೇಲಿನ ಶೋಷಣೆಗೆ ಬ್ರೇಕ್
ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸಣ್ಣ ಬಾಡಿಗೆದಾರರ ಮೇಲೆ ನಡೆಯುತ್ತಿರುವ ಶೋಷಣೆ ತಪ್ಪಿಸಬೇಕು ಎಂಬ ಸಲಹೆ ನೀಡಿದರು. ಇದಕ್ಕೂ ಉತ್ತರಿಸಿದ ಸಚಿವ, ಇಂದಿಗೂ ಸಣ್ಣಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎನ್ನುವುದು ನಿಜ. ಅವರನ್ನು ರಕ್ಷಿಸಲು ಈ ಕಾನೂನಿನಲ್ಲಿ ಅವಕಾಶವಿದೆ. ಆದರೆ ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೇ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಈ ಕಾನೂನು ಅನುಷ್ಠಾನ ಮಾಡಿದರೆ, ಜನರಿಗೆ ಅರಿವು ಮೂಡಿಸಿದರೆ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನು ಕ್ರಮೇಣ ತಡೆಯಬಹುದು ಎಂದರು.
ಒಟ್ಟಾರೆ ರಾಜ್ಯ ಸರ್ಕಾರ ಈ ಹೊಸ ತಿದ್ದುಪಡಿ ಮೂಲಕ ಬಾಡಿಗೆದಾರರು ಹಾಗೂ ಮನೆ ಮಾಲೀಕರ ನಡುವಿನ ಗೊಂದಲಗಳು ಹಾಗೂ ಶೋಷಣೆ ತಪ್ಪಿಸಲು ಮುಂದಾಗಿದೆ.












Click it and Unblock the Notifications