ಮರಾಠಿಗರಿಗೆ ಬೆಂಬಲ ಕೊಡ್ತೀವಿ ಎಂದ ಕರವೇ ನಾರಾಯಣಗೌಡ
ಮಹಾರಾಷ್ಟ್ರ, ಮರಾಠಿಗರು ಅಂದರೆ ಮೊದಲು ಕರ್ನಾಟಕದವರಿಗೆ ನೆನಪಾಗೋದೆ ಪುಂಡರ ಅಟ್ಟಹಾಸ, ಬೆಳಗಾವಿ ಗಡಿ ಕ್ಯಾತೆ. ಈ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಟಕ್ಕರ್ ಕೊಡುತ್ತಲೇ ಬಂದಿದೆ. ಕೆಲ ಮರಾಠಿಗರ ಪುಂಡಾಟಿಕೆಯಿಂದ ಸಿಡಿಮಿಡಿಗೊಳ್ಳುತ್ತಿದ್ದ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಅವರ ಮುಂದೆ ತೊಡೆ ತಟ್ಟಿ ಸವಾಲು ಹಾಕಿದ್ದೇ ಹೆಚ್ಚು. ಮರಾಠಿ ಪುಂಡರನ್ನು ಬಗ್ಗುಬಡಿಯುತ್ತೇವೆ ಎನ್ನುತ್ತಿದ್ದ ನಾರಾಯಣಗೌಡ ಇದೀಗ ದಿಢೀರನೆ ಮಹಾರಾಷ್ಟ್ರದ ಪರವಾಗಿ ನಿಲುವು ತಾಳಿದ್ದಾರೆ. ಸದ್ಯ ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಹೌದು ಇಲ್ಲಿವರೆಗೆ ಕನ್ನಡ, ಕನ್ನಡಿಗರು, ಕರ್ನಾಟಕದ ವಿಚಾರವಾಗಿ ಮರಾಠಿಗರ ವಿರುದ್ಧ ಹೋರಾಟಕ್ಕೆ ಕರೆ ನೀಡುತ್ತಿದ್ದ ಕರವೇ ನಾರಾಯಣಗೌಡ ಇದೀಗ ಮಹಾರಾಷ್ಟ್ರದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಮಹಾರಾಷ್ಟ್ರದ ಬ್ಯಾಂಕುಗಳಲ್ಲಿ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಮರಾಠಿ ಬಾರದ ಉತ್ತರ ಭಾರತೀಯರಿಂದ ಆಗುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಅಲ್ಲಿನ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ನಡೆಸುತ್ತಿರುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ ಒಕ್ಕೂಟದ ಪ್ರತಿಯೊಂದು ಭಾಷೆಗಳಿಗೂ ಆಯಾ ರಾಜ್ಯದಲ್ಲಿ ಮೊದಲ ಸ್ಥಾನ ಸಿಗಬೇಕು ಎನ್ನುವ ವಿಚಾರವನ್ನು ಕರವೇ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠಿ ಭಾಷೆಯಲ್ಲಿ ಅಂಗಡಿಗಳು, ಬ್ಯಾಂಕಿನಲ್ಲಿ ಮಾತನಾಡದ ಸಿಬ್ಬಂದಿಗಳ ವಿರುದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ದನಿಯೆತ್ತುತ್ತಿರುವುದನ್ನು ಇತ್ತೀಚಿನ ಪತ್ರಿಕಾ ವರದಿಯಲ್ಲಿ ಗಮನಿಸಿದ್ದೇನೆ ಎಂದಿದ್ದಾರೆ.
ಬ್ಯಾಂಕ್, ಅಂಗಡಿಗಳಲ್ಲಿ ರಾಜ್ಯದ ಭಾಷೆಯಲ್ಲಿ ಮಾತನಾಡದ ಸಿಬ್ಬಂದಿಗಳು ಹೆಚ್ಚಾಗಲು ಭಾರತ ಸರಕಾರದ ನಿಯಮಗಳೇ ಮೂಲ ಕಾರಣ, ಬ್ಯಾಂಕಿನ ಸಿಬ್ಬಂದಿ ನೇಮಕಾತಿಯ ಪರೀಕ್ಷೆಯಲ್ಲಿ ಆಯಾ ರಾಜ್ಯದ ಯುವಕರಿಗೆ ಮಾತ್ರ ಸಿಗಬೇಕಾಗಿದ್ದ ಅವಕಾಶವನ್ನು ಉತ್ತರ ಭಾರತದ ಯುವಕರಿಗೆ ಸಹಾಯವಾಗಲೆಂದು ಬದಲಿಸಿದ್ದು, ಗ್ರಾಹಕ ಸೇವೆಯ ಕಾನೂನಿನಲ್ಲಿ ಹಿಂದಿಯೇತರ ಗ್ರಾಹಕರ ಹಕ್ಕುಗಳಿಗೆ ಯಾವುದೇ ಬೆಲೆಕೊಡದಿರುವುದು ಕಾರಣ ಎಂದು ದೂರಿದ್ದಾರೆ.
ತಮ್ಮ ತಮ್ಮ ರಾಜ್ಯದಲ್ಲಿ ತಮ್ಮ ಭಾಷೆಯನ್ನು ಉಳಿಸಿ ಬೆಳೆಸಲು ಹೋರಾಟ ನಡೆಸುತ್ತಿರುವ ಭಾಷಾ ಸಂಘಟನೆಗಳ ಹೋರಾಟಕ್ಕೆ ಕರವೇ ಬೆಂಬಲಿಸುತ್ತದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಬ್ಯಾಂಕು, ಅಂಗಡಿಗಳಲ್ಲಿ ಮರಾಠಿ ಭಾಷೆಯಲ್ಲಿ ವ್ಯವಹಾರ ನಡೆಸಬೇಕೆಂದು ಒತ್ತಾಯಿಸುತ್ತಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನೆಗೆ ಈ ಹೋರಾಟದಲ್ಲಿ ಯಶಸ್ಸು ಸಿಗಲೆಂದು ಹಾರೈಸುತ್ತೇನೆ ಎಂದು ಬೆನ್ನುತಟ್ಟಿದ್ದಾರೆ.

ಕರ್ನಾಟಕದ ಬ್ಯಾಂಕು, ಅಂಗಡಿಯಲ್ಲಿ ಕನ್ನಡವನ್ನು ಬಳಸಬೇಕೆಂದು ಒತ್ತಾಯಿಸುವ ಹೋರಾಟವನ್ನು ಕರವೇ ಮುಂದುವರೆಸಿಕೊಂಡು ಹೋಗುತ್ತದೆ. ಕೇಂದ್ರ ಸರ್ಕಾರ ಕನ್ನಡೇತರ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಂಡು ಅವರವರ ರಾಜ್ಯಗಳಿಗೆ ವಾಪಸ್ ಕಳುಹಿಸಬೇಕು. ಈ ನಿಟ್ಟಿನಲ್ಲಿ ಬಾಧಿತ ರಾಜ್ಯಗಳ ಸಂಘಟನೆಗಳೊಂದಿಗೆ ಕೈಜೋಡಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಎಚ್ಚರಿಕೆಯೂ ನೀಡಿದ್ದಾರೆ.












Click it and Unblock the Notifications