ರಾಜ್ಯಸಭೆ : ಕೈಕೊಟ್ಟ ಬಂಡಾಯ ಶಾಸಕರು, ಜೆಡಿಎಸ್‌ಗೆ ಸೋಲು

Posted By:
Subscribe to Oneindia Kannada

ಬೆಂಗಳೂರು, ಜೂನ್ 11 : ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಮೂವರು ಕಾಂಗ್ರೆಸ್ ಮತ್ತು ಒಬ್ಬರು ಬಿಜೆಪಿಯ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮುಖಭಂಗವಾಗಿದೆ.

ಶನಿವಾರ ವಿಧಾನಸೌಧದಲ್ಲಿ ಮತದಾನ ನಡೆಯಿತು. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್‌ನಿಂದ ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ ಮತ್ತು ಜೆಡಿಎಸ್‌ನಿಂದ ಬಿ.ಎಂ.ಫಾರೂಕ್ ಕಣದಲ್ಲಿದ್ದರು.[ರಾಜ್ಯಸಭೆ ಚುನಾವಣೆ ನಂಬರ್ ಗೇಮ್]

ಚುನಾವಣೆ ಫಲಿತಾಂಶ
* ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿಗೆ ಗೆಲುವು
* ಬಿಜೆಪಿಯ ನಿರ್ಮಲಾ ಸೀತಾರಾಮನ್ ಅವರಿಗೆ ಗೆಲುವು
* ಜೆಡಿಎಸ್‌ನ ಬಿ.ಎಂ.ಫಾರೂಕ್ ಅವರಿಗೆ ಸೋಲು

rajya sabha

* ಇಂದು ನಡೆದ ರಾಜ್ಯಸಭಾ ಚುನಾವಣೆ ಮತ ಎಣಿಕೆಗೆ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ.

* 8 ಶಾಸಕರ ಮತವನ್ನು ಅಸಿಂಧುಗೊಳಿಸುವಂತೆ ಜೆಡಿಎಸ್ ಚುನಾವಣಾಧಿಕಾರಿಗಳಿಗೆ ದೂರು ನೀಡಿರುವುದರಿಂದ ರಾಜ್ಯಸಭೆ ಚುನಾವಣೆ ಮತ ಎಣಿಕೆ ವಿಳಂಬವಾಗಿದೆ.

* ನಿರೀಕ್ಷೆಯಂತೆ 8 ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷದ ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಮತ ಹಾಕಿದರು. ಜಮೀರ್ ಅಹಮದ್ ಖಾನ್ ಸೇರಿದಂತೆ 8 ಜನರು ಮತಕೇಂದ್ರದಲ್ಲಿದ್ದ ಪಕ್ಷದ ಏಜೆಂಟ್ ಎಚ್.ಡಿ.ರೇವಣ್ಣ ಅವರಿಎ ತೋರಿಸಿಯೇ ಕಾಂಗ್ರೆಸ್‌ಗೆ ಮತ ಹಾಕಿದರು.

* ಜೆಡಿಎಸ್ ಅಭ್ಯರ್ಥಿ ಫಾರೂಕ್ ಅವರು ಮೊದಲೇ 5 ಮತಗಳ ಕೊರತೆ ಅನುಭವಿಸುತ್ತಿದ್ದರು. ಈಗ ಪಕ್ಷದ 8 ಶಾಸಕರು ಕಾಂಗ್ರೆಸ್‌ಗೆ ಮತ ಹಾಕಿದರೆ ಫಾರೂಕ್ ಗೆಲುವು ಕಷ್ಟವಾಗಲಿದೆ. [ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಜಮೀರ್ ಅಹಮದ್]

* ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರ ನೇತೃತ್ವದಲ್ಲಿ 8 ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಮುಂದಾಗಿದ್ದಾರೆ. ಮೊದಲು 5 ಬಂಡಾಯ ಶಾಸಕರಿದ್ದರು. ಈಗ ಆ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. [ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತೆ?]

* 'ರಾಜ್ಯಸಭೆ ಚುನಾವಣೆ ಅಕ್ರಮವಾಗಿ ನಡೆಯುತ್ತಿದೆ' ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಎಚ್.ಡಿ.ರೇವಣ್ಣ ಅವರು ಒತ್ತಾಯಿಸಿದರು. [ಸ್ಟಿಂಗ್ ಆಪರೇಷನ್: ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]

* 'ಶಾಸಕ ಜಿ.ರಾಮಕೃಷ್ಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಅವರಿಗೆ ಸಹಕರಿಸಲು ಮತ ಕೇಂದ್ರಕ್ಕೆ ಬಂದಿದ್ದೆ. ನಾನು ಮತದಾನ ಮಾಡಿಲ್ಲ' ಎಂದು ಎಂಎಲ್‌ಸಿ ಗೋವಿಂದರಾಜು ಅವರು ಸ್ಪಷ್ಟನೆ ನೀಡಿದರು. ಗೋವಿಂದರಾಜಯ ಅವರು ಬಂದ ವಿಚಾರಕ್ಕೆ ಡಿಕೆಶಿ ಮತ್ತು ರೇವಣ್ಣ ನಡುವೆ ಜಟಾಪಟಿ ನಡೆದಿತ್ತು.

* ರೇವಣ್ಣ ಮತ್ತು ಡಿಕೆಶಿ ನಡುವೆ ವಾಗ್ವಾದ ನಡೆದ ಹಿನ್ನಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮತದಾನ ನಡೆಯುತ್ತಿರುವ ವಿಧಾನಸೌಧದ 106ನೇ ಕೊಠಡಿಗೆ ಆಗಮಿಸಿದರು.

* ಸಚಿವ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್‌ ನಾಯಕ ರೇವಣ್ಣ ನಡುವೆ ಮತ ಕೇಂದ್ರದಲ್ಲಿ ವಾಗ್ವಾದ ನಡೆದಿದೆ. ಚುನಾವಣಾಧಿಕಾರಿಗಳ ಜೊತೆಯೂ ರೇವಣ್ಣ ಅವರು ವಾಗ್ವಾದ ನಡೆಸಿದರು.

* ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಜಿ.ರಾಮಕೃಷ್ಣ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಸಹಾಯಕನೊಂದಿಗೆ ಮತದಾನ ಮಾಡಲು ಆಗಮಿಸಿದ್ದರು. ಇದಕ್ಕೆ ಜೆಡಿಎಸ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರೇವಣ್ಣ ಅವರು ಆಕ್ಷೇಪ ವ್ಯಕ್ತಪಡಿಸಿದರು.

* ರೇವಣ್ಣ ಅವರು ಚುನಾವಣಾಧಿಕಾರಿಗಳಿಗೆ ಈ ವಿಷಯ ತಿಳಿಸಿ, ವಾಗ್ವಾದ ನಡೆಸಿದರು. ಅವರು ಮೆಡಿಕಲ್ ಸರ್ಟಿಫೀಕೇಟ್ ತಂದಿದ್ದಾರೆ ಎಂದು ಚುನಾವಣಾಧಿಕಾರಿಗಳು ಹೇಳಿದರು. ಇದು ನಕಲಿ ಸರ್ಟಿಫೀಕೇಟ್ ಎಂದು ರೇವಣ್ಣ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಡಿ.ಕೆ.ಶಿವಕುಮಾರ್ ಅವರ ಜೊತೆಗೂ ಮಾತಿನ ಚಕಮಕಿ ನಡೆಸಿದರು.

* 'ನನ್ನ ರಾಜಕೀಯ ಗುರು ಆಸ್ಕರ್ ಫರ್ನಾಂಡೀಸ್ ಅವರಿಗೆ ಮತ ಹಾಕಿದ್ದೇನೆ' ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವಾ ಹೇಳಿದರು. ಮೊಯಿದ್ದೀನ್ ಬಾವಾ ಅವರ ಸಹೋದರ ಬಿ.ಎಂ.ಫಾರೂಕ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ.

* ಮತದಾನ ಮಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಜಗದೀಶ್ ಶೆಟ್ಟರ್, ಸಚಿವ ಯು.ಟಿ.ಖಾದರ್

* ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಪರಮೇಶ್ವರ ನಾಯಕ್ ಅವರ ವಿಚಾರವನ್ನು ಪ್ರಸ್ತಾಪಿಸಿದ ಅವರು, 'ತಮ್ಮನ್ನು ಕೇವಲವಾಗಿ ನೋಡಬೇಡಿ. ಈ ಪ್ರಕರಣದಿಂದ ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟಾಗಿದೆ' ಎಂದು ಆಕ್ರೋಶ ಹೊರಹಾಕಿದರು.

ರಾಜ್ಯಸಭೆ ಚುನಾವಣೆಗೆ ಮತ ಹಾಕಲು ಶಾಸಕರು ಹಣದ ಬೇಡಿಕೆ ಇಟ್ಟಿದ್ದಾರೆ ಎಂಬುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿತ್ತು. ಚುನಾವಣೆಯನ್ನು ಮುಂದೂಡಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಚುನಾವಣಾ ಆಯೋಗ ಜೂನ್ 11 ರಂದೇ ಚುನಾವಣೆ ನಡೆಸುವುದಾಗಿ ಹೇಳಿತ್ತು.

ಜೆಡಿಎಸ್ ಶಾಸಕರಿಗೆ ವಿಪ್ ಜಾರಿ : ಜೂನ್ 10ರ ಶುಕ್ರವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಐವರು ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಆದ್ದರಿಂದ, ಶನಿವಾರ ಪಕ್ಷದ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಲಾಗಿದ್ದು, ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಸೂಚನೆ ನೀಡಲಾಗಿದೆ. ಬಂಡಾಯ ಎದ್ದಿರುವ ಶಾಸಕರ ವಿಧಾನಸೌಧದ ಕೊಠಡಿಯ ಬಾಗಿಲಿಗೆ ವಿಪ್ ಅಂಟಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajya Sabha election results announced. The results in the Rajya Sabha polls in Karnataka were on expected lines with all three Congress candidates winning. The BJP's Nirmala Sitharam too won as expected. The JD(S) however which is facing a rebellion failed to ensure a victory for its candidate.
Please Wait while comments are loading...