Karnataka Rains: ಸೆಪ್ಟಂಬರ್ 17ರವರೆಗೆ ಈ ಏಳು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ, ಯೆಲ್ಲೋ ಅಲರ್ಟ್
ಬೆಂಗಳೂರು, ಸೆಪ್ಟಂಬರ್ 14: ರಾಜ್ಯದಲ್ಲಿ ಮುಂಗಾರು ಮಳೆ ಸಕ್ರಿಯವಾಗಿದ್ದು, ಕರಾವಳಿ, ದಕ್ಷಿಣ ಒಳನಾಡು ಮತ್ತು ಮಲೆನಾಡಿಗಿಂತ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿದೆ. ಶನಿವಾರ ಸಹ ಒಳನಾಡು ಜಿಲ್ಲೆಗಳ ಹಲವೆಡೆ ಉತ್ತಮ ಮಳೆ ಆಗಿದೆ. ಮುಂದಿನ ಸೆಪ್ಟಂಬರ್ 17ರವರೆಗೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ನಾಲ್ಕು ದಿನ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಮೂರು ದಿನ, ಕಲಬುರಗಿ ಮತ್ತು ಧಾರವಾಡದಲ್ಲಿ ಎರಡು ದಿನ ಬೀದರ್, ಗದಗ, ಯಾದಗಿರಿ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಗರಿಷ್ಠ 115 ಮಿಲಿ ಮೀಟರ್ ವರೆಗೂ ಇಲ್ಲಿ ಮಳೆ ನಿರೀಕ್ಷೆ ಇರುವ ಕಾರಣಕ್ಕೆ ಐಎಂಡಿ "ಯೆಲ್ಲೋ ಅಲರ್ಟ್' ನೀಡಿದೆ.

ಸದ್ಯ ವಿಪರೀತ ಮಳೆ ಕಂಡಿಸಿದ್ದ ಕರಾವಳಿ ಮೂರು ಜಿಲ್ಲೆಗಳು ಹಾಗೂ ನಿರಂತರ ಮಳೆ ಎದುರಿಸಿದ್ದ ಮಲೆನಾಡಿನ ಭಾಗಗಳಲ್ಲಿ ಭಾರೀ ಮಳೆಯ ಲಕ್ಷಣಗಳು ಇಲ್ಲ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಹಾಸನ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಹಗುರ ಮಳೆ, ಇಲ್ಲವೇ ಸೋನೆ ಮಳೆ ಬರಬಹುದು. ಇದರಿಂದ ಹೊರತು ಗಂಭೀರ ಸ್ವರೂಪದ ಬದಲಾವಣೆ ವಾತಾವರಣದಲ್ಲಿ ಸದ್ಯಕ್ಕೆ ಇಲ್ಲ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಯಲ್ಲಿ 64.6 ಮಿಮೀ ಮಳೆ, ಯಾದಗಿರಿ ಜಿಲ್ಲೆಯ ವಾರ್ಕನಳ್ಳಿ 52.0 ಮಿ.ಮೀ, ಬೆಳಗಾವಿ ಹಂದಿಗುಂದದಲ್ಲಿ 51.0 ಮಿ.ಮೀ., ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆಯಲ್ಲಿ 48.5 ಮಿ.ಮೀ. ಮತ್ತು ಬೆಳಗಾವಿ ಜಿಲ್ಲೆಯ ಅರಳಿಹಟ್ಟಿಯಲ್ಲಿ 47.0 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಹವಾಮಾನದ ಬದಲಾವಣೆ ಅಪ್ಡೇಟ್ಸ್
ಈಗಾಗಲೇ ನಿರ್ಮಾಣವಾಗಿದ್ದ ಬಂಗಾಳ ಕೊಲ್ಲಿಯಲ್ಲಿ ಪಶ್ಚಿಮ ಮಧ್ಯ ಮತ್ತು ವಾಯುವ್ಯ ಭಾಗದ ಸಮೀಪದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೆಪ್ಟೆಂಬರ್ 14 ರಂದು ಮುಂದುವರಿದಿದೆ. ಇದರೊಂದಿಗೆ ಸಂಬಂಧಿಸಿದ ಚಂಡಮಾರುತ ಪರಿಚಲನೆ ಸಮುದ್ರ ಮಟ್ಟದಿಂದ 5.8 ಕಿಲೋ ಮೀಟರ್ ವರೆಗೆ ವಿಸ್ತರಣೆ ಆಗಿದೆ. ಇದು ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ಒಡಿಶಾ, ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಛತ್ತೀಸ್‌ಗಢ ಕಡೆಗೆ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸರಿಯುವ ಸಾಧ್ಯತೆ ಇದೆ.
ವೈಪರೀತ್ಯಗಳ ಬಿರುಗಾಳಿ ವೇಗದಿಂದ ಕೂಡಿದ್ದು, ಇದು ಪಶ್ಚಿಮ ಬಂಗಾಳದ, ಒಡಿಶಾ ಕರಾವಳೀ ಭಾಗದತ್ತ ಬೀಸಲಿದೆ. ಮತ್ತೊಂದು ಸ್ಟ್ರಫ್ ಛತ್ತೀಸ್‌ಗಢ ಮೂಲಕ ಮಹಾರಾಷ್ಟ್ರ ರಾಜ್ಯದ ದಕ್ಷಿಣ ಭಾಗದವರೆಗೂ ವಿಸ್ತರಣೆ ಆಗಿದೆ. ಇದರ ಪ್ರಭಾವದಿಂದ ಅಲ್ಲಲ್ಲಿ ಭಾರೀ ಮಳೆ ಆಗುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications