Karnataka Rains: ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ, 6 ಜಿಲ್ಲೆಗಳಿಗೆ 'ಹಳದಿ' ಎಚ್ಚರಿಕೆ
ಬೆಂಗಳೂರು, ನವೆಂಬರ್ 13: ಕರ್ನಾಟಕ ರಾಜ್ಯದಲ್ಲಿ ಮಳೆಯಾಟ ಮುಂದುವರಿದಿದೆ. ಕೆಲವು ದಿನಗಳ ಹಿಂದಷ್ಟೇ ಅಬ್ಬರಿಸಿ ತಣ್ಣಗಾಗಿದ್ದ ಹಿಂಗಾರು ಮಳೆ, ಇದೀಗ ಮತ್ತೆ ಆರ್ಭಟಿಸಲು ಸಜ್ಜಾಗಿದೆ. ಮುಂದಿನ ಮೂರು ದಿನಗಳ ಕಾಲ ನವೆಂಬರ್ 16ರವರೆಗೆ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ 'ಹಳದಿ ಎಚ್ಚರಿಕೆ' ನೀಡಲಾಗಿದೆ.
ಈಗಾಗಲೇ ಮಳೆಗೆ ನದಿಗಳು, ಕೆರೆ ಕಟ್ಟೆಗಳು, ಜಲಾಶಯಗಳು ಭರ್ತಿಯಾಗಿವೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ಅತೀ ವೃಷ್ಟಿ ಉಂಟಾಗಿತ್ತು. ಬೆಳೆಗಳು ನಾಶವಾಗಿದ್ದವು. ಇದೀಗ ಮತ್ತೆ ಮಳೆ ಅಬ್ಬರಿಸಲು ಸಜ್ಜಾಗಿದೆ. ಮುಂದಿನ ಮೂರು ದಿನ ಈ ಕೆಳಗಿನ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

110 ಮಿ.ಮೀ. ಮಳೆ: ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಭಾರೀ ಮಳೆ ಆಗಲಿದೆ. ಕನಿಷ್ಠ 70 ರಿಂದ ಗರಿಷ್ಠ 110 ಮಿಲಿ ಮೀಟರ್ ಮಳೆ ಆಗುವ ಕಾರಣ ಹಿನ್ನೆಲೆ ಈ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಕೊಪ್ಪಳ, ಯಾದಗಿರಿ, ಬೀದರ್, ಕೊಪ್ಪಳ, ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಮುನ್ಸೂಚನೆ ಇದೆ. ನವೆಂಬರ್ 16ರ ನಂತರ ಈ ಪ್ರದೇಶಗಳಲ್ಲಿ ಅಧಿಕ ತಾಪಮಾನ, ಒಣಹವೆ ಮುಂದುವರಿಯಲಿದೆ.
ಹೆಚ್ಚುತ್ತಿರುವ ಚಳಿ, ಶೀಘ್ರವೇ ಭಾರಿ ಮಳೆ
ಇದೇ ವೇಳೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಹಾಸನ ಜಿಲ್ಲೆ ಸೇರಿ ವಿವಿಧ ಕಡೆಗಳಲ್ಲಿ ಲಘು ಮಳೆ ಆಗಲಿದೆ. ಈಗಾಗಲೇ ಈ ಭಾಗದಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ. ತೇವ ಭರಿತ ಗಾಳಿ ನಿರಂತರವಾಗಿ ಬೀಸುತ್ತಿದೆ.
ಹಿಂಗಾರು ಮಳೆ ಬಿಡುವ ಕೊಟ್ಟಿದ್ದರಿಂದ ಕಳೆದ ಹತ್ತು ದಿನಗಳಲ್ಲಿ ಹೆಸರು, ಮೆಕ್ಕೆಜೋಳ, ಬೆಂಡಿ ಸೇರಿ ಇನ್ನಿತರ ಮುಂಗಾರು ಬೆಳೆಗಳನ್ನು ರೈತರು ಕೊಯ್ಲು ಮಾಡುತ್ತಿದ್ದಾರೆ. ಅವರೆಲ್ಲ ಇದೀಗ ಹಿಂಗಾರು ಬಿತ್ತನೆಗೆ ಸಜ್ಜಾಗಿದ್ದು, ಮಳೆಯ ಅಗತ್ಯತೆ ಇದೆ.
ಕೆಆರ್‌ಎಸ್, ಹಾರಂಗಿ, ಭದ್ರಾವತಿ, ಲಿಂಗನಮಕ್ಕಿ, ವಾಣಿ ವಿಲಾಸ ಸಾಗರ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಮುಂದಿನ ಬೇಸಿಗೆಗೆ ಯಾವುದೇ ನೀರಿನ ತೊಂದರೆ ಇಲ್ಲದಷ್ಟು ಈ ಬಾರಿ ಮಳೆಗಾಲದಲ್ಲಿ ನೀರು ಸಮೃದ್ಧವಾಗಿದೆ. ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ಮತ್ತಷ್ಟು ಚುರುಕಾಗುವ ಲಕ್ಷಣಗಳು ಇವೆ.












Click it and Unblock the Notifications