Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಎರಡು ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
Karnataka Rain Alert: ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಣಬಿಸಿಲಿನಿಂದ ಜನ ಬೇಸತ್ತು ಹೋಗಿದ್ದಾರೆ. ಈ ನಡುವೆಯೇ ಹಲವೆಡೆ ಮಳೆರಾಯ ತಂಪೆರೆಯುತ್ತಿದ್ದಾನೆ. ಹಾಗೆಯೇ ಮುಂದಿನ ಐದು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಏಪ್ರಿಲ್ 7) ಬೆಳಗ್ಗೆ ಮೋಡ ಮುಚ್ಚಿದ ವಾತಾವರಣ ಇದ್ದು, 9 ಗಂಟೆ ಬಳಿಕ ಅದೇ ಆಡಿದ್ದೇ ಆಟ ಎಂಬಂತೆ ರಣಬಿಸಿಲು ಮುಂದುವರೆದಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ನಗರದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ.

ಈಗಾಗಲೇ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾದ ಪರಿಣಾಮ ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರಿಗೆ ತಂಪೆರೆದಂತಾಗಿದೆ. ಮುಂದಿನ ಹಲವು ದಿನಗಳ ಕಾಲ ಮತ್ತೆ ಮಳೆರಾಯ ಬೋರ್ಗರೆಯಲಿದ್ದಾನೆ ಎನ್ನುವ ಮುನ್ಸೂಚನೆ ನೀಡಿದೆ.
ರಾಜ್ಯದಾದ್ಯಂತ ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣ ಇರಲಿದ್ದು, ಹಲವೆಡೆ ಗುಡುಗು, ಮಿಂಚು ಸಸಹಿತ ಬಿರುಗಾಳಿ ಮಳೆಯಾಗಲಿದೆ. ಅಲ್ಲದೆ, ಗಾಳಿಯ ವೇಗ ಗಂಟೆಗೆ 30-40 ಕಿಲೋ ಮೀಟರ್ ಇರಲಿದೆ ಎಂದು ತಿಳಿಸಿದೆ. ಅದರಲ್ಲೂ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು , ಉಡುಪಿ , ದಕ್ಷಿಣ ಕನ್ನಡ , ಹಾಸನ , ಕೊಡಗು , ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಹಾವೇರಿ, ಕೊಪ್ಪಳ ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ತಿಳಿಸಿದೆ.
ಈಗಾಗಲೇ ಈ ಬಾರಿ ಹಲವು ಜಿಲ್ಲೆಗಳಲ್ಲಿ ದಾಖಲೆ ಮಟ್ಟದ ತಾಪಮಾನ ದಾಖಲಾಗಿದೆ. ಅದರಲ್ಲೂ ಪ್ರತಿ ವರ್ಷ ರಾಯಚೂರು, ಬಳ್ಳಾರಿ ಭಾಗಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿತ್ತು. ಆದರೆ ಈ ಬಾರಿ ಕರಾವಳಿ ಜಿಲ್ಲೆಗಳಲ್ಲಿಯೂ ಕೂಡ ಹೆಚ್ಚು ತಾಪಮಾನ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಅಲ್ಲದೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಹ ಫೆಬ್ರವರಿ ತಿಂಗಳಿನಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಇನ್ನು ರಣಬಿಸಿಲಿನಿಂದ ಬಸವಳಿದಿದ್ದ ಹಲವು ಜಿಲ್ಲೆಗಳ ಜನರಿಗೆ ಮಳೆರಾಯ ಈಗಾಗಲೇ ತಂಪೆರೆದಿದ್ದಾನೆ. ಇದೀಗ ಹಲವು ಜಿಲ್ಲೆಗಳಲ್ಲಿ ಸುರಿದಿರುವ ಮಳೆ ಮುಂಗಾರು ಪೂರ್ವ ಮಳೆಯಾಗಿದೆ. ಕೆಲವೇ ತಿಂಗಳುಗಳಲ್ಲಿ ಮುಂಗಾರು ಮಳೆ ಎಂಟ್ರಿ ಕೊಡಲಿದೆ ಎನ್ನುವ ಮುನ್ಸೂಚನೆ ಇದೆ.
ರಾಜ್ಯಕ್ಕೆ ಕಳೆದ ಬಾರಿ ಜೂನ್ ಆರಂಭದಲ್ಲೇ ಮುಂಗಾರು ಎಂಟ್ರಿ ಕೊಟ್ಟ ಹಿನ್ನೆಲೆ ಕೆರೆ-ಕಟ್ಟೆಗಳು, ನದಿಗಳು ಪ್ರಮುಖ ಜಲಾಶಯಗಳು ತುಂಬಿ ಹರಿದಿದ್ದವು. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿತ್ತು. ಮತ್ತೊಂದೆಡೆ ಹಲವೆಡೆ ಅವಾಂತರಗಳು ಕೂಡ ಸೃಷ್ಟಿಯಾಗಿದ್ದವು.












Click it and Unblock the Notifications