Karnataka Rain Update: ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬೀಳಲಿದೆ ಎನ್ನುವ ಮಾಹಿತಿ ಇಲ್ಲಿದೆ
ಕರ್ನಾಟಕ, ಮೇ, 11: ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತದ ಪ್ರಭಾವ ರಾಜ್ಯದ ಮೇಲೂ ಬೀರಿದ್ದು, ಇದರಿಂದ ಈಗಾಗಲೇ ಹಲವು ಜಿಲ್ಲೆಗಲ್ಲಿ ಸೈಕ್ಲೋನ್ ಭೀತಿಯೂ ಎದುರಾಗಿತ್ತು. ಆದರೆ ಇದೀಗ ಹವಾಮಾನ ವರದಿ ಪ್ರಕಾರ ಈ ಚಂಡಮಾರುತದ ಎಫೆಕ್ಟ್ ಇನ್ನೂ ರಾಜ್ಯದ ಮೇಲೆ ಕಡಿಮೆ ಆಗಲಿದೆ. ಹಾಗೆಯೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಕೂಡ (ಮೇ 11) ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹಾಗಾದರೆ ಯಾವ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ತಿಳಿಯಿರಿ.
ಸಿಲಿಕಾನ್ ಸಿಟಿಯಲ್ಲಿ ತಗ್ಗಿದ ಮಳೆ
ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳ ಕಾಲ ಮಳೆ ಬಿಡುವು ನೀಡಿದ್ದು, ಇಲ್ಲಿ ಸದ್ಯ ಮೋಡ ಕವಿದ ವಾತಾವರಣ ಮರೆಯಾಗಿ ಬಿಸಿಲಿನ ತಾಪಮಾನ ಮತ್ತೆ ಹೆಚ್ಚಾಗುತ್ತಿದೆ. ಹಾಗೆಯೆ ಇಂದು ಕೂಡ ನಗರದಲ್ಲಿ ಯಾವುದೇ ಮಳೆ ಬೀಳುವ ಲಕ್ಷಣಗಳು ಕಾಣುತ್ತಿಲ್ಲ, ಬದಲಾಗಿ ಬಿಸಿಲಿನ ವಾತಾವರಣ ಮುಂದುವರೆದಿದೆ.

ಮಳೆ ಪಡೆಯಲಿರುವ ಜಿಲ್ಲೆಗಳು
ಕಳೆದ ಎರಡು ದಿನಗಳಿಂದ ರಾಜ್ಯದ ಕೆಲವು ಕಡೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಇದರಿಂದ ಸಾಕಷ್ಟು ಅನಾಹುತಗಳೇ ಸಂಭವಿಸಿವೆ. ಕೆಲವೆಡೆ ಗಾಳಿ ಮಳೆಗೆ ಮರಗಳು ರಸ್ತೆಗೆ ಉರುಳಿದರೆ, ಇನ್ನು ಕೆಲವೆಡೆ ಮನೆ ಮಠಗಳನ್ನು ಕಳೆದುಕೊಂಡ ಘಟನೆಗಳು ಸಹ ನಡೆದಿವೆ. ಹಾಗೆಯೆ ಇಂದಿನಿಂದ ಹಲವೆಡೆ 48 ಗಂಟೆಗಳ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅದರಲ್ಲೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ರಾಜ್ಯದ ವಿವಿಧೆಡೆ ಮೇ 14ರವರೆಗೆ ಅಲ್ಲಲ್ಲಿ ಅನಿರೀಕ್ಷಿತ ಮಳೆ ಸುರಿಯುವ ಎಚ್ಚರಿಕೆಯ ಸಂದೇಶವನ್ನು ಕೂಡ ನೀಡಿದೆ. ಮತ್ತೊಂದೆಡೆ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದ್ದು, ಇಲ್ಲಿನ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೆಯೆ ನಿನ್ನೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವು ಕಡೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಆಗಿದ್ದು, ಇಂದು ಸಹ ಇಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಇನ್ನು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಮುನ್ಸೂಚನೆ ಇದೆ.
ಉತ್ತರ ಒಳನಾಡಿನ ಹಲವು ಕಡೆ ಒಣಹವೆ ಮುಂದುವರೆಯಲಿದ್ದು, ಕೆಲವೆಡೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ಆಗಲಿದೆ. ಬೆಳಗಾವಿ, ಧಾರಾವಾಡ, ಹಾವೇರಿಯಲ್ಲಿ ಸಾಧಾರಣ ಮಳೆ ಆಗಲಿದೆ. ಅಲ್ಲದೆ ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ ಎಂದು ತಿಳಿಸಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಇಲ್ಲಿನ ಚಾಮರಾಜನಗರ, ಮಂಡ್ಯ, ಮೈಸೂರಿನಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರಿ ಮಳೆ ಆಗಯ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಬೀಳುವ ಸಾಧ್ಯೆತೆ ಇದೆ.
ಅದರಲ್ಲೂ ಮೋಚಾ ಚಂಡಮಾರುತ ಪರಿಣಾಮ ಮೇ 14ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಿರಲಿದ್ದು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ
ಒಟ್ಟಿನಲ್ಲಿ ಹವಾಮಾನ ಇಲಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈ ಚಂಡಮಾರುತದ ಪ್ರಭಾವ ಕಡಿಮೆಯಾಗಿದೆ. ಆದರೂ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯಲಿದ್ದಾನೆ ಎನ್ನುವ ಮಾಹಿತಿಯನ್ನು ನೀಡಿದೆ.












Click it and Unblock the Notifications