Karnataka Rains : ಏಪ್ರಿಲ್ 15ರಿಂದ ಕರ್ನಾಟಕದ ವಿವಿಧೆಡೆ ಜೋರು ಮಳೆ: ಮುನ್ಸೂಚನಾ ವರದಿ
ಬೆಂಗಳೂರು, ಏಪ್ರಿಲ್ 11: ಕರ್ನಾಟಕ ಬಹುತೇಕ ಎಲ್ಲ ಕಡೆ ಸುರಿದು ಕೊಂಚ ಬ್ರೇಕ್ ನೀಡಿದ್ದ ಪೂರ್ವ ಮುಂಗಾರು ಮಳೆ ಇದೇ ಏಪ್ರಿಲ್ 15ರಿಂದ ಮತ್ತೆ ಅಬ್ಬರ ಆರಂಭಿಸುವ ಮುನ್ಸೂಚನೆ ನೀಡಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ವರದಿ ತಿಳಿಸಿದೆ.
ಮಕ್ಕಳ ಶಾಲಾ ಕಾಲೇಜುಗಳಿಗೆ ರಜೆ ಇದೆ. ರಾಜ್ಯದ ವಿವಿಧ ಭಾಗದಲ್ಲಿ ಸುರಿದಿದ್ದ ಮಳೆ ವಿರಾಮ ನೀಡಿದೆ. ಹೀಗೆಂದು ನೀವು ಎಲ್ಲಿಯಾದರೂ ಪ್ರವಾಸ, ದೂರದ ಪ್ರಯಾಣ ಇಟ್ಟುಕೊಂಡಿದ್ದರೆ ಮುಂದೂಡುವುದು ಒಳಿತು ಎನ್ನಲಾಗಿದೆ. ಕಾರಣ ಇನ್ನೆರಡೆ ದಿನದಲ್ಲಿ ಮಳೆರಾಯ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.

ಕರ್ನಾಟಕದ ಮಲೆನಾಡಿನ ನಾಲ್ಕು ಜಿಲ್ಲೆ ಹೊರತುಪಡಿಸಿದರೆ ಬಹುತೇಕವಾಗಿ ಮಳೆ ಕ್ಷೀಣಿಸಿದೆ. ಆದರೆ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಹಗುರ ಮಳೆ ಬರುವ ಮುನ್ಸೂಚನೆ ಇದೆ. ಇದರ ಹೊರತಾಗಿ ಏಪ್ರಿಲ್ 15ರವರೆಗೆ ಎಲ್ಲಿಯೂ ಮಳೆ ಮುನ್ಸೂಚನೆ ಇಲ್ಲ.
ಏಪ್ರಿಲ್ 15ರಿಂದ ಮೂರು ದಿನ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಭಾಗದಲ್ಲಿ ವ್ಯಾಪಕವಾಗಿ ಗುಡುಗು ಮಿಂಚು ಸಹಿತ ಮಳೆ ಸುರಿಯಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಲಿದೆ. ಅದೇ ರೀತಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಗದಗ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜೋರು ಮಳೆ ಆಗಲಿದೆ.
ಇನ್ನೂ ದಕ್ಷಿಣ ಒಳನಾಡಿನ ಭಾಗದ ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಮೈಸೂರು, ದಾವಣಗೆರೆ, ಚಿತ್ರದುರ್ಗದಲ್ಲಿ ಅಧಿಕ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಒಟ್ಟು ಏಪ್ರಿಲ್ 15ರಿಂದ ಸುಮಾರು ಮೂರು ದಿನಗಳ ಕಾಲ ಮಳೆಯ ವಾತಾವರಣ ಕಂಡು ಬರುವ ಸಾಧ್ಯತೆ ಇದೆ.

ತಾಪಮಾನದಲ್ಲಿ ಮತ್ತೆ ಏರಿಕೆ
ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಬಿದ್ದ ಮಳೆಗೆ ತಾಪಮಾನದಲ್ಲಿ ತುಸು ಇಳಿಕೆ ಕಂಡು ಬಂದಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ, ನಿತ್ಯ ಸಂಜೆ ವ್ಯಾಪಕ ಮಳೆ ದಾಖಲಾಗಿತ್ತು. ಇದರಿಂದ ಸ್ವಲ್ಪ ಇಳಿಕೆಯಾಗಿದ್ದ ಬಿಸಿಲಿನ ಧಗೆ ಮತ್ತೆ ಹೆಚ್ಚಾಗುತ್ತಿದೆ.
ಕಳೆದ 24 ಗಂಟೆಯಲ್ಲಿ ಉತ್ತರ ಕರ್ನಾಟಕದ ಕೊಪ್ಪಳ್ಳ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಈ ಮೂರು ಜಿಲ್ಲೆ ಹೊರತುಪಡಿಸಿದರೆ ವಿಜಯಪುರ, ಗದಗ, ಹಾವೇರಿ, ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.
ಇನ್ನೂ ಕಾರವಾಡ, ಧಾರವಾಡ, ಚಿತ್ರದುರ್ಗ, ಮಂಡ್ಯ ಹಾಗೂ ಶಿವಮೊಗ್ಗದಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. ರಾಜ್ಯ ಕನಿಷ್ಠ ಉಷ್ಣಾಂಶ ಚಿಕ್ಕಮಗಳೂರಿನಲ್ಲಿ 12.8 ಡಿಗ್ರಿ ಸೆಲ್ಸಿಯಸ್ ಮತ್ತು ಮಡಿಕೇರಿ ಹಾಗೂ ಚಿಂತಾಮಣಿಯಲ್ಲಿ ತಲಾ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಭಾರತಕ್ಕೆ ಈ ವರ್ಷ ಶೇ.20ರಷ್ಟು ಬರಗಾಲ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆ ಭಾರತದಲ್ಲಿನ ಈ ವರ್ಷದ ಮುಂಗಾರು ಮಳೆ ಕುರಿತು ದೀರ್ಘಕಾಲದ ಮುನ್ಸೂಚನಾ ವರದಿ ಪ್ರಕಟಿಸಿದೆ. ಅದರ ಪ್ರಕಾರ ಪ್ರಸಕ್ತ ಮುಂಗಾರು ಅವಧಿಯಲ್ಲಿ ಮಳೆ ನಿರೀಕ್ಷೆ ಮಟ್ಟದಲ್ಲಿ ದಾಖಲಾಗುವುದು ಅನುಮಾನ ಎನ್ನಲಾಗಿದೆ. ವಾಡಿಕೆಯಷ್ಟು ಬಂದರೆ ಹೆಚ್ಚು ಎನ್ನಲಾಗುತ್ತಿದೆ. ಇದರಿಂದಾಗಿ ಶೇ.20ರಷ್ಟು ಬರಗಾಲ ಆವರಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.












Click it and Unblock the Notifications