Karnataka Rain: ಇನ್ನೆರಡು ದಿನ ಬಿಸಿಲು ತಡೆದುಕೊಳ್ಳಿ.. ಮಳೆ ಬರೋದು ಪಕ್ಕಾ!
ಮಳೆ, ಸದ್ಯ ಇಡೀ ರಾಜ್ಯದ ಜನ ಎದುರು ನೋಡುತ್ತಿರುವ ಏಕೈಕ ಸಂಗತಿಯಾಗಿದೆ. ಒಂದು ಕಡೆ ರಣ ಬಿಸಿಲು ಜನರ ಜೀವ ಹಿಂಡುತ್ತಿದ್ದರೆ, ನೀರಿನ ಕೊರತೆ ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಬೆಂಗಳೂರು ಜನ ಕೂಡ ಈ ಬಾರಿ ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿದ್ದಾರೆ. ಹವಾಮಾನ ಇಲಾಖೆ ಕೊನೆಗೂ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಕೊಟ್ಟಿರುವುದು ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಇನ್ನೂ ಎರಡು ದಿನಗಳ ಕಾಲ ತೀವ್ರ ಬಿಸಿಲು ಇರಲಿದ್ದು, ಏಪ್ರಿಲ್ 9 ರಿಂದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ತನ್ನ ಬುಲೆಟಿನ್‌ನಲ್ಲಿ ಮಾಹಿತಿ ನೀಡಿದೆ.

ತನ್ನ ವರದಿಯಲ್ಲಿ ಮುಂದಿನ ಏಳು ದಿನಗಳ ಹವಾಮಾನ ಮುನ್ಸೂಚನೆಯನ್ನು ನೀಡಿದೆ. ಏಪ್ರಿಲ್ 7 ಮತ್ತು 8 ರಂದು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಆರ್ದ್ರತೆ ಇರಲಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಕಲ್ಬುರ್ಗಿ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ಶಾಖ ಹೆಚ್ಚಾಗಿರಲಿದ್ದು, ಶಾಖದ ಅಲೆಯ ಹಳದಿ ಎಚ್ಚರಿಕೆ ನೀಡಿದೆ.
ಏಪ್ರಿಲ್ 9 ರಿಂದ ಮಳೆ ಆರಂಭ!
ಕೊನೆಗೂ ಹವಾಮಾನ ಇಲಾಖೆ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ. ಏಪ್ರಿಲ್ 10ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 14 ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ.
1/2 @Indiametdept ಮುಂದಿನ 7 ದಿನಗಳ ಜಿಲ್ಲಾವಾರು #ಬಿಸಿಗಾಳಿ ಮತ್ತು #ಮಳೆ #ಮುನ್ಸೂಚನೆ (ದಿನಾಂಕ 07-04-2024).
— Karnataka State Natural Disaster Monitoring Centre (@KarnatakaSNDMC) April 7, 2024
7 days District-wise #heatwave & #rainfall #forecast.#heatwave #yellow #Alert: Belgavi, Bidar, Vijayapura, Bagalkote, Gadag, Kalburgi, Haveri, Dharwad,Koppal, Raichur, Ballari, pic.twitter.com/gRookOkZ0Q
ಉತ್ತರ ಒಳನಾಡಿನ ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಗದಗ ಜಿಲ್ಲೆಯಲ್ಲಿ ಏಪ್ರಿಲ್ 13-14ರಂದು ಸಾಧಾರಣ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯನಗರ, ತುಮಕೂರು, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ರಾಮನಗರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ವರದಿಯಲ್ಲಿ ತಿಳಿಸಿದೆ.












Click it and Unblock the Notifications