Karnataka rain update: ರಾಜ್ಯದ ಮುಂದಿನ ಮೂರು ದಿನದ ಹವಾಮಾನ ವರದಿ
ಬೆಂಗಳೂರು, ಮೇ 12: ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಈ ಪೈಕಿ 'ಮೋಚಾ' ಚಂಡಮಾರುತದ ಪ್ರಭಾವ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಿಗೆ ಅತ್ಯಧಿಕ ಮಳೆ ಬರುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 13ರಿಂದ 15ರವರೆಗಿನ ಮೂರು ದಿನದ ಅವಧಿಯಲ್ಲಿ ಆರಂಭಿಕ 48 ಗಂಟೆ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಧಾರಾಕಾರ ಮಳೆಯ ಆಗಮನವಾಗಲಿದೆ. ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಇನ್ನೂ ರಾಜ್ಯದ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ, ರಾಮನಗರ, ಕೊಡಗು ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣದಿಂದ ಉತ್ತಮ ಮಳೆಯ ಸಿಂಚನವಾಗಲಿದೆ.
ನಾಳೆಯಿಂದ ಎರಡು ದಿನ ಮಾತ್ರ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಸಾಧಾರಣವಾಗಿ ಮಳೆ ಬರಲಿದೆ. ಉಳಿದಂತೆ ಯಾವುದೇ ಗಂಭೀರ ಬದಲಾವಣೆಗಳು ಇಲ್ಲ ಎಂದು ಹೇಳಲಾಗಿದೆ. ಈಗಾಗಲೇ ಮೋಚಾ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ತೀವ್ರ ಸ್ವರೂಪ ಪಡೆದಿದೆ. ಅದರ ಪರಿಣಾಮವಾಗೇ ಮಳೆಯಾರ್ಭಟ ಶುರುವಾಗಿದೆ.

ಬೆಂಗಳೂರಿನಲ್ಲಿ ಇಂದು ಸಂಜೆ ಸುರಿದ ಮಳೆ
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ 4 ಗಂಟೆ ನಂತರ ವಿವಿಧೆಡೆ ತುಂತುರು ಮಳೆ ಬಿದ್ದಿದೆ. ಕೋರಮಂಗಲ, ಜಯನಗರ, ಮಡಿವಾಳ, ಚಾಮರಾಜಪೇಟೆ, ಹೆಬ್ಬಾಳ, ಮೆಜೆಸ್ಟಿಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಳೆ ಸಿಂಚನವಾಗಿದೆ. ಇದೇ ರೀತಿ ಮುಂದಿನ ಎರಡು ದಿನ ಸಹ ಬೆಂಗಳೂರು ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಒಟ್ಟಾರೆ ಮೋಚಾ ಚಂಡಮಾರುತವು ಮೇ 15ರವರೆಗೆ ಆರ್ಭಟಿಸಲಿದೆ. ಅದರ ತೀವ್ರತೆ ಹೆಚ್ಚಾದರೆ ಬೆಂಗಳೂರು ಸೇರಿದಂತೆ ಕರ್ನಾಟಕದ ಜಿಲ್ಲೆಗಳು ಹಾಗೂ ನೆರೆಯ ರಾಜ್ಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಓಡಿಶಾ ಮತ್ತು ಬಾಂಗ್ಲಾದೇಶದ ತೀರ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಸುರಿಯಲಿದೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ನೆರೆಯ ಭೀತಿ ಸೃಷ್ಟಿಯಾಗಿದೆ. ತೀವ್ರ ಹಾನಿ ಸಂಭವವೂ ಇದೆ.












Click it and Unblock the Notifications