Rain Alert: ರಾಜ್ಯದ ಈ ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ
ರಾಜ್ಯಕ್ಕೆ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟ ಬಳಿಕ ಹಿಂಗಾರು ಕೂಡ ಕೃಪೆ ತೋರುವ ಲಕ್ಷಣ ಕಾಣಿಸುತ್ತಿಲ್ಲ, ಆದರೂ ಭಾನುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಉತ್ತಮ ಮಳೆಯಾಗುತ್ತಿದೆ, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಉತ್ತಮ ಮೋಡವಿದ್ದು, ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಬೆಂಗಳೂರು ನಗರದ ಅರೆಕೆರೆ, ಕೋಣನಕುಂಟೆ, ಬೇಗೂರು, ಗೊಟ್ಟಿಗೆರೆ, ಹುಳಿಮಾವು, ಕೊತ್ತನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆಯಾಗಿದ್ದು, ಭಾನುವಾರ ರಾತ್ರಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುತ್ತಿದೆ. ಹಲವು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ಇದೆ.
ಈ ಜಿಲ್ಲೆಗಳಿಗೆ ನವೆಂಬರ್ 6ರವರೆಗೆ ಮಳೆ
ಹಾಸನ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ತುಮಕೂರು, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಸಂಪೂರ್ಣವಾಗಿ ಕೈಕೊಟ್ಟ ಬಳಿಕ, ರಾಜ್ಯದ ಬಹಹುತೇಕ ಎಲ್ಲಾ ಜಿಲ್ಲೆಗಳು ಕೂಡ ಬರದಿಂದ ಕಂಗೆಟ್ಟಿದ್ದು, ಹಿಂಗಾರು ಮಳೆ ಉತ್ತಮವಾಗಿ ನಡೆಸಿದರೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೂ ಕಡಿಮೆಯಾಗಲಿದೆ.












Click it and Unblock the Notifications