Rain Alert: ಏಪ್ರಿಲ್ 30ರ ಬಳಿಕ ರಾಜ್ಯದಲ್ಲಿ ಮತ್ತೆ ಭರ್ಜರಿ ಮಳೆ: ಐಎಂಡಿ
ಯುಗಾದಿ ಹಬ್ಬದ ದಿನದಿಂದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆ ಈಗ ಬ್ರೇಕ್ ತೆಗೆದುಕೊಂಡಿದೆ. ಸದ್ಯ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ. ಆದರೆ ಮತ್ತೊಮ್ಮೆ ಮುಂಗಾರು ಪೂರ್ವ ಮಳೆ ವಾಪಸಾತಿ ಮಾಡಲಿದೆ.
ಏಪ್ರಿಲ್ 29ರವರೆಗೆ ರಾಜ್ಯದಲ್ಲಿ ಬಿಸಿಲು ಹೆಚ್ಚಿರಲಿದೆ. ಹಲವು ಜಿಲ್ಲೆಗಳಿಗೆ ಶಾಖದ ಅಲೆಯ ಆರೆಂಜ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಏಪ್ರಿಲ್ 30ರ ಬಳಿಕ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಶುರುವಾಗಲಿದೆ.

ಏಪ್ರಿಲ್ 30ರಂದು ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಮೇ 1 ರಂದು ಕಲಬುರ್ಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಮೇ 2ರಂದು ಬೀದರ್, ಕಲಬುರ್ಗಿ, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 3ರಂದು ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಮಂಡ್ಯ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಬೆಳಗಾವಿಯಲ್ಲಿ ಮಳೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲು ತೀವ್ರವಾಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ವರುಣದೇವನ ಕೃಪೆ ಸಿಕ್ಕಿದೆ. ಶುಕ್ರವಾರ ಕೂಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಬೆಳಗಾವಿಯ ದಕ್ಷಿಣ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಭೂತರಾಮನಹಟ್ಟಿ, ಬೆಳಗಾವಿ ನಗರ ಪ್ರದೇಶಗಳಲ್ಲಿ ಕೂಡ ಮಳೆಯಾಗಿದೆ.
ಬೆಂಗಳೂರಿಗೆ ಮಳೆ ಯಾವಾಗ?
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮೇ ಮೊದಲ ವಾರದಲ್ಲಿ ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮೇ ಎರಡನೇ ವಾರ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 20ರಂದು ನಗರದ ಹಲವು ಕಡೆಗಳಲ್ಲಿ ದರ್ಶನ ಕೊಟ್ಟಿದ್ದ ಮಳೆ ಮತ್ತೆ ಕಾಣೆಯಾಗಿದ್ದು, ಮೇ ತಿಂಗಳಿನಲ್ಲಾದರೂ ಉತ್ತಮ ಮಳೆಯಾದರೆ ಸಾಕು ಎನ್ನುವಂತಾಗಿದೆ.












Click it and Unblock the Notifications