Michaung Cyclone: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ ಐದು ದಿನ ಭಾರೀ ಮಳೆ
ಬೆಂಗಳೂರು, ನವೆಂಬರ್ 30: ಇಂದಿನಿಂದ ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಬಳಿ ವಾಯುಭಾರ ಕುಸಿತ ಹಾಗೂ ಬಂಗಾಳಕೊಲ್ಲಿಯಲ್ಲಿ ಮಿಚುವಾಂಗ್ ಚಂಡಮಾರುತ ಉಂಟಾಗಿದೆ. ಪರಿಣಾಮ ದೇಶದ ನಾನಾ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬಂಗಾಳಕೊಲ್ಲಿಯಲ್ಲಿ ಈ ವರ್ಷದ 4ನೇ ಚಂಡಮಾರುತ ಸೃಷ್ಟಿಯಾಗಿದ್ದು ಮಿಚುವಾಂಗ್ ಎಂದು ಹೆಸರಿಸಲಾಗಿದೆ. ಹೀಗಾಗಿ ಬಂಗಾಳಕೊಲ್ಲಿ ಕರಾವಳಿ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಆಗುವ ಸಾಧ್ಯತೆ ಇದ್ದು, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ನವೆಂಬರ್ 30 ರಿಂದ ಡಿಸೆಂಬರ್ 5ರವರೆಗೂ ಬಂಗಾಳ ಕೊಲ್ಲಿಯಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿ.ಮೀ. ಇರಲಿದೆ. ಮತ್ತು ಡಿಸೆಂಬರ್ 2ರಂದು ಗಾಳಿಯ ವೇಗವು ಗಂಟೆಗೆ 60-80 ಕಿ.ಮೀ. ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದ್ದು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಒಟ್ಟು 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಮಿಧಿಲಿ ಚಂಡಮಾರುತ ಬಳಿಕ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದೆ. ಮಿಚುವಾಂಗ್ ಚಂಡಮಾರುತವು ನವೆಂಬರ್ 30ರ ವೇಳೆಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತವು ಗಂಟೆಗೆ 45 ರಿಂದ 80 ಕಿಲೋ ಮೀಟರ್ ವೇಗದಲ್ಲಿ ಬಂಗಾಳಕೊಲ್ಲಿ ಕರಾವಳಿ ಭಾಗಕ್ಕೆ ಬಂದಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಕರ್ನಾಟಕ ಹೊರತುಪಡಿಸಿ ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ತಮಿಳುನಾಡು, ಪುದುಚೇರಿ, ಕಾರೈಕಾಲ್ ಮತ್ತು ಕೇರಳ ಸೇರಿದಂತೆ ಇನ್ನು ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ.












Click it and Unblock the Notifications