Karnataka Rain: ಬೆಂಗಳೂರು ಸೇರಿದಂತೆ ರಾಜ್ಯದ ಈ ಭಾಗಗಳಲ್ಲಿ 3 ದಿನಗಳಲ್ಲಿ ಮಳೆ: ಐಎಂಡಿ
Karnataka Rain: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಚಳಿ ಹೆಚ್ಚಾಗುತ್ತಿದೆ. ತೀವ್ರ ಚಳಿ ವಾತಾವರಣ ಇನ್ನೂ ಮೂರು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಜನವರಿ 9ರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಶುರುವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕನಿಷ್ಠ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್ ಧಾರವಾಡದಲ್ಲಿ ದಾಖಲಾಗಿದೆ. ಇಂದಿನ ಹವಾಮಾನ ಹೇಗಿದೆ ಹಾಗೂ ಯಾವಾಗ, ಎಲ್ಲಿ ಮಳೆ ಆಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಚಳಿ ವಾತಾವರಣ ಮುಂದುವರಿದಿದ್ದು, ವಿವಿಧೆಡೆ ಒಣಹವೆ ಇದೆ. ಕರ್ನಾಟಕದ ಒಳಭಾಗದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಮಂಜುಕವಿದ ವಾತಾವರಣವಿತ್ತು.

ಚಳಿ ಮುಂದುವರಿಯಲಿದೆ
ಇನ್ನು ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಚಳಿ ಮುಂದುವರಿಯಲಿದೆ. ಮುಂದಿನ ನಾಲ್ಕೈದು ದಿನಗಳ ವರೆಗೆ ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನವು 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕ್ರಮೇಣ ಇಳಿಕೆಯಾಗಲಿದೆ. ಮುಂದಿನ ಐದು ದಿನಗಳಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಹವಾಮಾನದಲ್ಲಿ ದೊಡ್ಡ ಬದಲಾವಣೆಗಳು ಇಲ್ಲ. ಆದರೆ ಮಳೆ ಶುರುವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಹೇಗಿದೆ ಹವಾಮಾನ ?
ಇನ್ನು ಬೆಂಗಳೂರಿನಲ್ಲೂ ಮೈಕೊರೆಯುವ ಚಳಿ ಮುಂದುವರಿದಿದೆ. ಬೆಂಗಳೂರಿನಲ್ಲೂ ಜನವರಿ 9ರಿಂದ ಮಳೆ ಶುರುವಾಗಲಿದೆ. ಇನ್ನು ಮುಂದಿನ 24 ಗಂಟೆ ಅವಧಿಯಲ್ಲಿ ಶುಭ್ರ ಆಕಾಶ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಿಗ್ಗೆ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಅನುಕ್ರಮವಾಗಿ 26 ಡಿಗ್ರಿ ಸೆಲ್ಸಿಯಸ್ ಹಾಗೂ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ಮುಂದಿನ 48 ಗಂಟೆ ಅವಧಿಯಲ್ಲೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
ಜನವರಿ 9ರಿಂದ ಮಳೆ
ರಾಜ್ಯದಲ್ಲಿ ಜನವರಿ 9 ಮತ್ತು 10ಕ್ಕೆ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆ ಆಗಲಿದೆ. ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರಿಪೋರ್ಟ್ ತಿಳಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪ್ರದೇಶ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಇರಲಿದೆ.
ಇನ್ನು ಆಗ್ನೇಯ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿ ಮತ್ತು ಸಮಭಾಜಕ ಹಿಂದೂ ಮಹಾಸಾಗರದ ಮೇಲಿನ ವಾಯು ಸೈಕ್ಲೋನಿಕ್ ಪರಿಚಲನೆಯು ಸಮಭಾಜಕ ಹಿಂದೂ ಮಹಾಸಾಗರದ ಪಕ್ಕದ ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯಭಾಗದ ಮೇಲೆ ಸರಾಸರಿ ಸಮುದ್ರಮಟ್ಟದಿಂದ 5.8 ಕಿ.ಮೀ ವರೆಗೆ ವಿಸ್ತರಿಸಿದೆ. ಮಾಲ್ಡೀವ್ಸ್ ಮತ್ತು ಪಕ್ಕದ ಲಕ್ಷದ್ವೀಪ ಪ್ರದೇಶದಿಂದ ಪೂರ್ವದಲ್ಲಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ವಾಯುಪರಿಚಲನೆ ಸೃಷ್ಟಿಯಾಗಿದೆ.
ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ದಕ್ಷಿಣ ಕೇರಳ ಕರಾವಳಿಯ ಮೇಲಿನ ವಾಯು ಚಂಡಮಾರುತ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಕಡಿಮೆ ಗುರುತಿಸಲ್ಪಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications