ಕರ್ನಾಟಕ ರೈಲ್ವೆ ಯೋಜನೆಗಳಿಗೆ ₹7500 ಕೋಟಿ, ಬೆಂಗಳೂರು ಉಪನಗರ ರೈಲ್ವೆಗೆ ಸಿಕ್ಕಿದ್ದೆಷ್ಟು?
ಬೆಂಗಳೂರು, ಜುಲೈ 24: ಕೇಂದ್ರ ಸರ್ಕಾರದ ಬಹುನಿರೀಕ್ಷೆಯ 2024-25ನೇ ಸಾಲಿನ ಬಜೆಟ್ ನೆನ್ನೆ ಮಂಗಳವಾರ ಮಂಡನೆ ಆಗಿದೆ. ಇದರಲ್ಲಿ ಕರ್ನಾಟಕಕ್ಕೆ ಏನು ಲಭಿಸಿದೆ. ಏನೇನು ಘೋಷಣೆ ಆಗಿಲ್ಲ ಎನ್ನುವವರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಉತ್ತರ ನೀಡಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 2.55 ಲಕ್ಷ ಕೋಟಿ ರು. ಅನುದಾನ ನಿಗದಿಪಡಿಸಿದ್ದಾರೆ. ಇದು ಈವರೆಗೆ ರೈಲ್ವೆ ಇಲಾಖೆಗೆ ಕೇಂದ್ರ ಬಜೆಟ್‌ನಲ್ಲಿ ನೀಡಿದ ಅತ್ಯಧಿಕ ಅನುದಾನ ವಾಗಿದೆ.

ಮುಂದುವರಿದ ಅವರು, ರೈಲ್ವೆ ಅಭಿವೃದ್ಧಿಗೆ ಹಂಚಿಕೆ ಮಾಡಿದ ಹಣದ ಪೈಕಿ ಕರ್ನಾಟಕ ರಾಜ್ಯಕ್ಕೆ 7500 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಇದೇ ವರ್ಷ ಫೆಬ್ರವರಿ 1ರಂದು ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ 2.52 ಲಕ್ಷ ಕೋಟಿ ರೂಪಾಯಿ ಹಣವನ್ನು ರೈಲ್ವೆ ಇಲಾಖೆಗೆ ನೀಡಲಾಗಿತ್ತು. ಅದನ್ನು ಈಗ ಇನ್ನಷ್ಟು ಹೆಚ್ಚಿಸಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ 2.4 ಲಕ್ಷ ಕೋಟಿ ರು.ಗಳನ್ನು ರೈಲ್ವೆಗೆ ನೀಡಲಾಗಿತ್ತು. ಈ ಮೊದಲು ರೈಲ್ವೆ ಇಲಾಖೆಗೆ ಪ್ರತ್ಯೇಕ ಬಜೆಟ್ ಇತ್ತು. ನರೇಂದ್ರ ಮೋದಿ ಅದನ್ನು ರದ್ದುಪಡಿಸಿದ ನಂತರ ಇದೇ ಬಜೆಟ್ ನಲ್ಲಿ ರೈಲ್ವೆಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಕರ್ನಾಟಕ ರೈಲ್ವೆ: ಏನೆಲ್ಲ ಅಭಿವೃದ್ಧಿ?
ಕರ್ನಾಟಕದಲ್ಲಿ ಹೊಸ ರೈಲು ಮಾರ್ಗ, ರೈಲ್ವೆ ದ್ವಿಪಥ ಹಳಿ, ವಿದ್ಯುದೀಕರಣ, ಗೇಜ್ ಪರಿವರ್ತನೇ ಸೇರಿದಂತೆ ರಾಜ್ಯದಲ್ಲಿ ರೈಲ್ವೆ ಮೂಲಕ ಸೌಕರ್ಯ ಅಭಿವೃದ್ಧಿಗೆ ಈ 7500 ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಲಾಗುತ್ತದೆ.
2009 ರಿಂದ 2014ರ ಅವಧಿಯಲ್ಲಿ ಅಂದಿನ ಕೇಂದ್ರ ಸರ್ಕಾರದಿಂದ ಕರ್ನಾಟಕದ ರೈಲ್ವೆ ವಲಯಕ್ಕೆ 835 ಕೋಟಿ ರೂಪಾಯಿ ಹಣ ಹಂಚಿಕೆ ಮಾಡಲಾಗುತ್ತಿತ್ತು. ಇಂದಿಗೆ ಹೋಲಿಕೆ ಮಾಡಿದರೆ ಅದು ಒಟ್ಟು ಒಂಬಂತ್ತು ಪಟ್ಟು ಹೆಚ್ಚಾಗಿದೆ ಎಂದು ವಿ.ಸೋಮಣ್ಣ ವಿವರಿಸಿದರು.
ಬೆಂಗಳೂರು ಉಪನಗರ ಯೋಜನೆಗೆ ರೂ.350 ಕೋಟಿ
ಕರ್ನಾಟಕದಲ್ಲಿ ವಿವಿಧಡೆ 31 ರೈಲ್ವೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸಗಳು ಆಗುತ್ತಿವೆ. ಈ ಎಲ್ಲ ಯೋಜನೆಗಳ ಒಟ್ಟು 3800 ಕಿಲೋ ಮೀಟರ್‌ಗೂ ಅಧಿಕವಾಗಿದೆ. ಬೆಂಗಳೂರು ಉಪನಗರ ಯೋಜನೆಗೆ 350 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ರಾಜ್ಯದ ಮಟ್ಟಿಗೆ ಕೊಟ್ಟೂರು-ಹರಿಹರ-ಹರಪನಹಳ್ಳಿ, ತುಮಕೂರು-ಚಿತ್ರದುರ್ಗ-ದಾಣಗೆರೆ, ಶಿವಮೊಗ್ಗ-ರಾಣೆಬೆನ್ನೂರು ಸೇರಿದಂತೆ ವಿವಿಧ ಹೊಸ ರೈಲು ಮಾರ್ಗಗಳಿಗೆ ಹೆಚ್ಚು ಅನುದಾನ ಘೋಷಣೆ ಆಗಿದೆ ಎಂದು ಅವರು ಕೇಂದ್ರ ಸರ್ಕಾರ ಮತ್ತು ವಿತ್ತ ಸಚಿವರಿಗೆ ಧನ್ಯವಾದ ತಿಳಿಸಿದರು.












Click it and Unblock the Notifications