Karnataka Election: ಎಎಪಿ ಪರ 2 ದಿನ ಪಂಜಾಬ್ ಸಿಎಂ ಮಾನ್, ಸಂಸದ ಚಡ್ಡಾರಿಂದ ಭರ್ಜರಿ ಪ್ರಚಾರ, ಯಾವಾಗ?
ಬೆಂಗಳೂರು, ಏಪ್ರಿಲ್ 17: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಅನ್ನು ಆಮ್ ಆದ್ಮಿ ಪಾರ್ಟಿ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ನೆರೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಸದರನ್ನೆ ಬೆಂಗಳೂರಿಗೆ ಕರೆಯಿಸಿ ಅವರಿಂದ ಭರ್ಜರಿ ಪ್ರಚಾರ ಮಾಡಿಸಲು ಸಜ್ಜಾಗಿದೆ. ಈ ಸಂಬಂಧ ಪಕ್ಷ ತಯಾರಿ ನಡೆಸಿದೆ.
ಆಮ್ ಆದ್ಮಿ ಪಾರ್ಟಿ (ಎಎಪಿ) ಉತ್ತರ ಕರ್ನಾಟಕದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮತ್ತು ಬೆಂಗಳೂರಿನಲ್ಲಿ ಪಕ್ಷದ ರಾಜ್ಯಸಭಾ ರಾಘವ್ ಚಡ್ಡಾ ಅವರಿಂದ ಬೃಹತ್ ಪ್ರಚಾರ ನಡೆಸಲಿದೆ. ಅವರಿಂದಲೇ ಮತಯಾಚಿಸಲು ಪಕ್ಷ ಪ್ಲಾನ್ ಮಾಡಿದೆ.

ಇದೇ ವಾರ ಏಪ್ರಿಲ್ 18ರ ಮಂಗಳವಾರದಂದು ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಆಗಮಿಸಲಿದ್ದಾರೆ. ಅವರು ಅಂದು ಮಧ್ಯಾಹ್ನ 1.30ಗಂಟೆಗೆ ಗದಗ ಜಿಲ್ಲೆಯ ರೋಣದಲ್ಲಿ ರೋಡ್ ಶೋ ಹಾಗೂ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಸಂಜೆ 5 ಗಂಟೆಗೆ ಹುಬ್ಬಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಏಪ್ರಿಲ್ 19ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಮೆರವಣಿಗೆ (ರೋಡ್ ಶೋ) ಜರುಗಲಿದೆ. ಅಲ್ಲಿ ಸಹ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾನ್ ಅವರು ಭಾಗವಹಿಸಲಿದ್ದಾರೆ.
ಬಾಗಲಕೋಟೆಯಲ್ಲೂ ರೋಡ್ ಶೋ
ಅಂದು ಮಧ್ಯಾಹ್ನ 1 ಗಂಟೆಗೆ ಬಾಗಲಕೋಟೆ ಜಿಲ್ಲೆಯ ತೆರದಾಳ ಕ್ಷೇತ್ರದಲ್ಲೂ ರೋಡ್ ಶೋ ಮೂಲಕ ಮತಯಾಚನೆ ನಡೆಸಯಲಿದೆ. ಅಂದು ಸಹ ಎಎಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ತೆರದಾಳಲ್ಲಿ ನಡೆಯುವ ರೈತರ ರ‍್ಯಾಲಿಯಲ್ಲೂ ಭಗವಂತ್ ಮಾನ್ ಭಾಗವಹಿಸಲಿದ್ದಾರೆ. ಸಂಜೆ ಅಲ್ಲಿಂದ ಹುಬ್ಬಳ್ಳಿಗೆ ಬಂದು ಪಂಜಾಬ್ ಗೆ ಮರಳಲಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾರವರು ಏಪ್ರಿಲ್ 19ರ ಬುಧವಾರದಂದು ಬೆಂಗಳೂರಿಗೆ ಆಗಮಿಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಪುಲಿಕೇಶಿನಗರದಲ್ಲಿ ಬೃಹತ್ ಮೆರವಣಿಗೆ ಹಾಗೂ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ನಂತರ ಸಂಜೆ 4.30ಕ್ಕೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲೂ ಹಮ್ಮಿಕೊಂಡಿರುವ ರೋಡ್ ಶೋ ನಲ್ಲಿ ಪಾಲ್ಗೊಂಡು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಿದ್ದಾರೆ. ಮಾರನೇ ದಿನ ಏಪ್ರಿಲ್ 20ರ ಗುರುವಾರದಂದು ಬೆಳಗ್ಗೆ 10 ಗಂಟೆಗೆ ದಾಸರಹಳ್ಳಿಯಲ್ಲಿ ಮತ್ತು ಸಂಜೆ 4.30ಕ್ಕೆ ಸಿ.ವಿ.ರಾಮನ್‌ನಗರ ಕ್ಷೇತ್ರದಲ್ಲಿನ ರೋಡ್ ಶೋನಲ್ಲಿ ಹಾಗೂ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡು ಅಭ್ಯರ್ಥಿಗಳಿಗೆ ಶಕ್ತಿ ತುಂಬಲಿದ್ದಾರೆ ಎಂದು ಎಎಪಿ ಪ್ರಕಟಣೆ ತಿಳಿಸಿದೆ.
ಪದ್ಮನಾಭನಗರ: ಅಜಯ್ ಗೌಡ ನಾಮಪತ್ರ ಸಲ್ಲಿಕೆ
ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು. ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಅಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿರುವ ಅಜಯ್ ಗೌಡ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ 11 ಗಂಟೆಗೆ ಪದ್ಮನಾಭನಗರ ವಿಧಾನಸಭಾ ಅಭ್ಯರ್ಥಿ ಅಜಯ್ ಗೌಡ ಸೇರಿದಂತೆ ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಹತ್ತಿರದ ದೇವಗಿರಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಣತರ ಅಜಯ್ ಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ದೇವಸ್ಥಾನದಿಂದ ಪಾದಯಾತ್ರೆ ಮಾಡುವ ಮೂಲಕ ಕಿಮ್ಸ್ ಆಸ್ಪತ್ರೆ ರಸ್ತೆಯ ಆರ್ ಒ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು ಎಂದು ಪಕ್ಷ ತಿಳಿಸಿದೆ.












Click it and Unblock the Notifications