KSRTC Bus Fare: ಸಾರಿಗೆ ಬಸ್ ಪ್ರಯಾಣ ದರ ಶೇ.15 ರಷ್ಟು ಏರಿಕೆಗೆ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 31: ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳನ್ನು ಒಪ್ಪಿದ್ದೆ ಆದಲ್ಲಿ ಹೊಸ ವರ್ಷಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸೇರಿದಂತೆ ನಾಲ್ಕು ನಿಗಮಗಳ ಬಸ್ ಸಂಚಾರ ಮತ್ತಷ್ಟು ದುಬಾರಿ ಆಗಲಿದೆ. ಹೀಗಾದರೆ ಸಾರಿಗೆ ನಿಗಮಗಳ ಶೇಕಡಾ 15ರಷ್ಟು ಟಿಕೆಟ್ ದರ ಏರಿಕೆ ಬೇಡಿಕೆ ಈಡೇರಿದಂತಾಗುತ್ತದೆ. ಸದ್ಯ ಈ ವಿಚಾರ ಮನವಿ ಹಂತದಲ್ಲಿದೆ. ಸರ್ಕಾರ ಹೊಸ ವರ್ಷದಂದು ಈ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ.
ರಾಜ್ಯದ ನಾಲ್ಕು ನಿಗಮಗಳಲ್ಲಿ ಹಣ ಕೊರತೆ ಇದೆ. ಅಲ್ಲದೇ ಇಂದಿನ ದಿನಮಾನಗಳಲ್ಲಿ ನಿರ್ವಹಣೆ ವೆಚ್ಚ, ವಾಹನಗಳ ಬಿಡಿ ಭಾಗಗಳ ವೆಚ್ಚವು ಹೆಚ್ಚಾಗಿದೆ. ಇದೆಲ್ಲ ಕಾರಣಗಳಿಂದ ಶೇಕಡಾ 15ರಷ್ಟು ಪ್ರಯಾಣದ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿವೆ. ಈಗಾಗಲೇ ಕೆಲವು ಬಾರಿ ಪ್ರಸ್ತಾನೆಗಳನ್ನು ಸಲ್ಲಿಸಿವೆ. ಅವೆಲ್ಲವು ಸರ್ಕಾರದ ಮುಂದಿದೆ. ಇನ್ನೂ ತೀರ್ಮಾನವಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಾಹನಗರ ಸಾರಿಗೆ ಸಂಸ್ಥೆ (BMTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯಲ್ಲಿ ಹಣದ ಕೊರತೆ ಇದೆ. ಶಕ್ತಿ ಯೋಜನೆಯ ಬಾಕಿ ಹಣ ಬರಬೇಕಿದೆ. ಈ ಸಂಬಂಧ ನಿಗಮದ ಮುಖ್ಯಸ್ಥರು ಕಳೆದ ಆರು ತಿಂಗಳಿನಿಂದ ಟಿಕೆಟ್ ದರ ಏರಿಕೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಈ ನಾಲ್ಕು ನಿಗಮಗಳಿಗೆ ಮಾಸಿಕವಾಗಿ ಬರುವ ಆದಾಯದಲ್ಲಿ ಒಟ್ಟು ಶೇಕಡಾ 40ರಷ್ಟು ಆದಾಯ ಇಂಧನಕ್ಕೆ ಹೋಗುತ್ತದೆ. ಅದರಲ್ಲಿ ನೌಕರರ ವೇತನ ಭರಿಸಬೇಕು. ವಾಹನಗಳ ಬಿಡಿ ಭಾಗಗಳ ಬೆಲೆ ಹೆಚ್ಚಳ, ನಿರ್ವಹಣಾ ವೆಚ್ಚ ಅಧಿಕವಾಗಿದೆ. ಹೀಗಾಗಿ ಪ್ರಯಾಣ ದರ ಪರಿಷ್ಕರಣೆಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿವೆ.
ರಾಜ್ಯ ಸರ್ಕಾರ ನಿಗಮಗಳ ಮನವಿಯನ್ನು ಮುಂದಿನ ದಿನಗಳಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಿದೆ. ಕಳೆದ ಹತ್ತು ವರ್ಷಗಳಲ್ಲಿ ಎರಡು ಭಾರಿ ದರ ಪರಿಷ್ಕರಣೆ ಮಾಡಲಾಗಿದೆ. 2014ರ ನಂತರ 2020ರಲ್ಲಿ ಬೆಲೆ ಏರಿಕೆ ಮಾಡಿದ ನಂತರ ಈವರೆಗೆ ಮತ್ತೆ ದರ ಹೆಚ್ಚಳ ಮಾಡಿಲ್ಲ. ಸರ್ಕಾರ ಶೀಘ್ರವೇ ಸಾರಿಗೆ ಬಸ್ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಜನರಿಗೆ ಬೆಲೆ ಏರಿಕೆ ಬರೆ
ಜನವರಿ 14ರ ನಂತರ ಪ್ರತಿ ಲೀಟರ್ ಹಾಲಿನ ದರ 5 ರೂಪಾಯಿ ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಇದೇ ವೇಳೆ ಬಸ್ ಟಿಕೆಟ್ ದರ ಹೆಚ್ಚಾದರೂ ಆಗಬಹುದು. ಇನ್ನೂ ಬೆಂಗಳೂರು ಜಲಮಂಡಳಿಯ ದರ ಏರಿಕೆಯ ಚಿಂತನೆ ಇದೆ. ವರ್ಷದಿಂದ ವರ್ಷಕ್ಕೆ ಬದುಕು ದುಬಾರಿ ಆಗುತ್ತಿದೆ. ಜನರಿಗೆ ಆರ್ಥಿಕ ಹೊರೆ ನಿರಂತರವಾಗಿ ಮುಂದುವರಿದೆ. ಹೊಸ ವರ್ಷಕ್ಕೆ ಜನರಿಗೆ ಸರ್ಕಾರ ಬೆಲೆ ಏರಿಕೆಯ ಬರೆ ಹಾಕುವ ಚಿಂತನೆಯಲ್ಲಿದೆ.












Click it and Unblock the Notifications