Bhavani Revanna: ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುವಂತೆ ಭವಾನಿ ರೇವಣ್ಣಗೆ ಸೂಚಿಸಿದ ಜೆಡಿಎಸ್
ಬೆಂಗಳೂರು, ಏಪ್ರಿಲ್ 14: ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಹಾಸನದ ಬದಲಿಗೆ ಮೈಸೂರಿನ ಚಾಮರಾಜ ಕ್ಷೇತ್ರವನ್ನು ನೀಡಲು ಜೆಡಿಎಸ್ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 2018ರಲ್ಲಿ ಬಿಜೆಪಿ ಗೆದ್ದ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮೈಸೂರಿನ ಜೆಡಿಎಸ್‌ನ ಕೆಲ ಹಿರಿಯ ನಾಯಕರು ಭವಾನಿ ಅವರಿಗೆ ಆಹ್ವಾನ ನೀಡಿದ್ದಾರೆ.
ಸದ್ಯ ಬಿಜೆಪಿಯ ಪ್ರೀತಂ ಗೌಡ ಹಿಡಿತದಲ್ಲಿರುವ ಹಾಸನದ ಮೇಲೆ ರೇವಣ್ಣ ಮತ್ತು ಭವಾನಿ ಕಣ್ಣು ನೆಟ್ಟಿದ್ದಾರೆ. ಹಾಸನದಿಂದ ಸ್ಪರ್ಧಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಹಾಸನದಿಂದ ಕಣಕ್ಕಿಳಿಸುವುದಾಗಿ ಹೇಳಿದ್ದಾರೆ. ಸ್ವರೂಪ್ ಅವರು ಜೆಡಿಎಸ್ ಟಿಕೆಟ್ ಪಡೆಯುವುದು ಬಹುತೇಕ ಖಚಿತವಾಗಿದೆ. ಆದರೆ, ಎಚ್‌ಡಿ ರೇವಣ್ಣ ಅವರು ಇದಕ್ಕೆ ಸಮ್ಮತಿ ಸೂಚಿಸಿಲ್ಲ.

ಮೈಸೂರಿನ ಪಕ್ಷದ ನಾಯಕರ ಪ್ರಕಾರ, ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜೆಡಿಎಸ್ ಗೆಲ್ಲಬಹುದು. 2018 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಶೇ 19.41 ಮತಗಳನ್ನು ಗಳಿಸಿದರೆ, ಬಿಜೆಪಿ ಅಭ್ಯರ್ಥಿ 36.77% ಮತಗಳನ್ನು ಪಡೆದರು. ನಾವು ಮೂರನೇ ಸ್ಥಾನದಲ್ಲಿದ್ದರೂ ಭವಾನಿ ರೇವಣ್ಣ ಅವರಂತಹ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ದೊಡ್ಡ ಬದಲಾವಣೆಯನ್ನು ತರುತ್ತದೆ ಎಂದು ಜೆಡಿಎಸ್‌ನ ಹಿರಿಯ ನಾಯಕರೊಬ್ಬರು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಕೂಡ ಚಾಮರಾಜ ಆಯ್ಕೆಯನ್ನು ಸೂಚಿಸಿದ್ದಾರೆ. ಹಾಸನ ಹೊರತುಪಡಿಸಿ ಬೇರೆ ಯಾವುದೇ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಜಿ ಪ್ರಧಾನಿ ಭವಾನಿ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
'ಹಾಸನದಿಂದ ಭವಾನಿ ಗೆಲ್ಲುವುದಿಲ್ಲ ಎಂಬುದು ಆಂತರಿಕ ಸಮೀಕ್ಷೆಯಲ್ಲಿ ಬಹಿರಂಗವಾಗುತ್ತಿದ್ದಂತೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡದಿರುವುದು ಖಚಿತವಾಗಿದೆ. ಇದಕ್ಕೆ ಸಮ್ಮತಿ ಸೂಚಿಸಿರುವ ದೇವೇಗೌಡರು ಭವಾನಿ ಅವರಿಗೆ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದ್ದಾರೆ' ಎಂದು ಮೂಲಗಳು ತಿಳಿಸಿದ್ದಾರೆ.

ದೇವೇಗೌಡರು ಶುಕ್ರವಾರ ಕುಮಾರಸ್ವಾಮಿ ಮತ್ತು ರೇವಣ್ಣ ಅವರೊಂದಿಗೆ ಸಭೆ ನಡೆಸಿ, ಈ ಕುರಿತು ಹೆಚ್ಚಿನ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಚಾಮರಾಜ ಕ್ಷೇತ್ರದಲ್ಲಿ ಒಟ್ಟು 2,28,508 ಮತದಾರರಿದ್ದು, ಇದರಲ್ಲಿ 1,14,639 ಪುರುಷರು ಹಾಗೂ 1,13,820 ಮಹಿಳೆಯರು ಇದ್ದಾರೆ. ಜಾತಿವಾರು ಮತದಾರರನ್ನು ವರ್ಗೀಕರಿಸಿದರೆ ಬ್ರಾಹ್ಮಣರು, ವೀರಶೈವ-ಲಿಂಗಾಯತರು, ಕುರುಬರು, ಮುಸ್ಲಿಮರು ಮತ್ತು ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಈ ಕ್ಷೇತ್ರದಿಂದ ಭವಾನಿ ಗೆಲ್ಲುವ ಉತ್ತಮ ಅವಕಾಶವಿದೆ ಎಂಬುದು ಜೆಡಿಎಸ್ ಮುಖಂಡರ ನಂಬಿಕೆ. ಈ ಬಗ್ಗೆ ಭವಾನಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಹಾಸನವನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಿಲ್ಲ.
ಎಚ್‌ಡಿ ರೇವಣ್ಣ ಅವರ ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ ಇಬ್ಬರೂ ರಾಜಕಾರಣದಲ್ಲಿ ಇದ್ದಾರೆ. ರೇವಣ್ಣ ಅವರು ಐದು ಬಾರಿ ಹೊಳೆನರಸೀಪುರ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜ್ವಲ್ ಅವರು ಹಾಸನದ ಸಂಸದರಾಗಿದ್ದಾರೆ. ಸೂರಜ್ ಅವರು ಎಂಎಲ್‌ಸಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಭವಾನಿ ಅವರು ವಿಧಾನಸಭೆಗೆ ಚುನಾಯಿತರಾದರೆ ಎಲ್ಲಾ ನಾಲ್ಕು ಕುಟುಂಬದ ಸದಸ್ಯರು ಸಕ್ರಿಯ ರಾಜಕೀಯದಲ್ಲಿ ಇರಲಿದ್ದಾರೆ.












Click it and Unblock the Notifications