ಬಿಎಲ್ ಸಂತೋಷ್ ವಿರುದ್ಧದ ಮುಸುಕಿನ ಯುದ್ಧದಲ್ಲಿ ಮತ್ತೆ ಗೆದ್ದ ಬಿಎಸ್‌ವೈ: ಕೇಸರಿ ಪಕ್ಷದಲ್ಲಿ ಕಡಿಮೆಯಾಗದ ಲಿಂಗಾಯತ ನಾಯಕನ ಪ್ರಭಾವ
ಬೆಂಗಳೂರು, ಏಪ್ರಿಲ್ 13: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಬಿಜೆಪಿ ( BJP ) ಎರಡು ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದರೆ, ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೂ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿಲ್ಲ.
ಈಗ ಪ್ರಕಟಿಸಲಾದ ಎರಡೂ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರ ಪ್ರಭಾವದ ಯಾವುದೇ ಸೂಚನೆಗಳು ಕಂಡು ಬಂದಿಲ್ಲ. ಆರಂಭದಲ್ಲಿ ಯಡಿಯೂರಪ್ಪ ಅವರ ನಿಷ್ಠಾವಂತರು ಆತಂಕದಲ್ಲಿದ್ದರು. ಬಿಎಲ್ ಸಂತೋಷ್ ಅವರ ಕೈ ಮೇಲಾಗುತ್ತದೆ ಎಂದು ವರದಿಗಳಾಗಿದ್ದವು. ಆದರೆ, ಈಗ ಘೋಷಣೆಯಾದ ಅಭ್ಯರ್ಥಿಗಳ ಪೈಕಿ ಬಿಎಸ್‌ವೈ ಅವರ ಕೈ ಮೇಲಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಉದಾಹರಣೆಗೆ ತುಮಕೂರು ಗ್ರಾಮಾಂತರದಲ್ಲಿ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ಕೊಡಿಸಲು ಬಿಎಲ್ ಸಂತೋಷ್ ಮುಂದಾಗಿದ್ದರು. ಆದರೆ, ಈ ಕ್ಷೇತ್ರದ ಟಿಕೆಟ್ ಯಡಿಯೂರಪ್ಪ ನಿಷ್ಠಾವಂತ ಬಿ ಸುರೇಶ್ ಅವರಿಗೆ ಒಲಿದಿದೆ. ಪಕ್ಷದಲ್ಲಿನ ಇಬ್ಬರು ನಾಯಕರ ತಿಕ್ಕಾಟದಲ್ಲಿ ಸಿಕ್ಕಿಬಿದ್ದಿದ್ದ ಸುರೇಶ್ ಮೊನ್ನೆಯಷ್ಟೇ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅವರಿಗೆ ಟಿಕೆಟ್ ಘೋಷಿಸಿರುವುದು ಯಡಿಯೂರಪ್ಪನವರ ಪ್ರಭಾವ ಕಾಣುತ್ತಿದೆ.

ಬೆಂಗಳೂರಿನ ಬ್ಯಾಟರಾಯನಪುರ ವಾರ್ಡ್‌ಗೆ ಯಡಿಯೂರಪ್ಪ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಪುತ್ರ ಬಿ.ವೈ.ವಿಜಯೇಂದ್ರ ಅವರೊಂದಿಗೆ ನಿಕಟವಾಗಿರುವ ತಮ್ಮೇಶ್ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಹಿಂದಿನ ಅಭ್ಯರ್ಥಿ ಎ.ರವಿ ಅವರನ್ನು ಕೈಬಿಡಲಾಗಿದೆ. ಎ ರವಿ ಅವರು ಬಿಎಲ್ ಸಂತೋಷ್ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗದಿಂದ ಜಿ ಎಚ್ ತಿಪ್ಪಾರೆಡ್ಡಿಗೆ ಟಿಕೆಟ್ ನೀಡುವುದಿಲ್ಲ ಎಂದು ಪಕ್ಷದೊಳಗೆ ಮಾತುಗಳು ಕೇಳಿಬಂದಿದ್ದವು, ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ.
2019ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಪಕ್ಷಾಂತರಗೊಂಡ 17 ಶಾಸಕರು ಇದಕ್ಕೆ ಕಾರಣವಾಗಿದ್ದರು. ಇವರಲ್ಲಿ ಬಹುತೇಕರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಯಡಿಯೂರಪ್ಪನವರ ಮಾತು ಚಲಾವಣೆಯಾಗಿದೆ ಎಂಬುದು ತಿಳಿದುಬರುತ್ತದೆ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸ್ಪರ್ಧಿಸಲು ಮುಂದಾಗಿದ್ದರೂ, ಯಡಿಯೂರಪ್ಪ ಅವರ ಒತ್ತಾಯದ ಮೇರೆಗೆ ಮಹೇಶ್ ಕುಮಟಹಳ್ಳಿ ಅವರನ್ನು ಅಥಣಿಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಸಿದ್ದರಾಮಯ್ಯ ವಿರುದ್ಧ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸುವುದು ನನಗೆ ಇಷ್ಟವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಅವರ ಮಾತಿನಂತೆಯೇ ಶಿಕಾರಿಪುರದಲ್ಲಿ ಮಗನಿಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ನೋಡಿಕೊಂಡಿದ್ದಾರೆ. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶೆಟ್ಟರ್ ಅವರನ್ನು ಕಣಕ್ಕಿಳಿಸಬೇಕು ಎಂದು ಯಡಿಯೂರಪ್ಪ ಬಯಸಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರ ಮಾತುಗಳು ಮೇಲುಗೈ ಸಾಧಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಹಿರಂಗವಾಗಿ ಖಚಿತಪಡಿಸಿರುವುದು ನಮಗೆ ಸಂತೋಷವಾಗಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಹೇಳಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಯಡಿಯೂರಪ್ಪ ಅವರನ್ನು ಪ್ರಧಾನಿ ಮೋದಿ ಸನ್ಮಾನಿಸಿದ್ದರು. ಅವರನ್ನು ಹಾಡಿ ಹೊಗಳಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಯಡಿಯೂರಪ್ಪನವರ ಹಿಂಬಾಲಕರು ಸಂಭ್ರಮಾಚರಣೆ ನಡೆಸುತ್ತಿದ್ದರೂ ಬಿಜೆಪಿ ಮುಖಂಡ ಗೋ ಮಧುಸೂಧನ್ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಎಲ್ಲರೂ ಯಡಿಯೂರಪ್ಪನವರ ಅನುಯಾಯಿಗಳು. ಬೇರೆ ಬೇರೆ ನಾಯಕರನ್ನು ಬೆಂಬಲಿಸುವ ಬಣಗಳೊಂದಿಗೆ ಬಿಜೆಪಿಯನ್ನು ಪ್ರತ್ಯೇಕ ಗುಂಪುಗಳಾಗಿ ಬೇರ್ಪಡಿಸಲು ಸಾಧ್ಯವಿಲ್ಲ. ನಾಲ್ಕು ದಶಕಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ಯಡಿಯೂರಪ್ಪ ಕರ್ನಾಟಕದ ಬಿಜೆಪಿಗೆ ಅಗ್ರಗಣ್ಯರು ಎಂದಿದ್ದಾರೆ.












Click it and Unblock the Notifications