HD Kumaraswamy: ಜೆಡಿಎಸ್ ಅಭ್ಯರ್ಥಿಗೆ ಬಂಪರ್ ಆಫರ್ ನೀಡಿದ ಸಚಿವ ವಿ.ಸೋಮಣ್ಣ: ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು,ಏಪ್ರಿಲ್ 26: ಚಾಮರಾಜನಗರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಜೆಡಿಎಸ್ ಅಭ್ಯರ್ಥಿಗೆ ಆಮಿಷ ಇಟ್ಟಿರುವ ಸಚಿವ ಸೋಮಣ್ಣ ವೈಖರಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದು, ಸೋಮಣ್ಣ ಅವರ ಭಾಷೆ ನಮಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗೂಟದ ಕಾರು ಅಂದರೆ ಏನು? ಪ್ರವೈಟ್ ಕಾರ್ ತಗೊಂಡು ಗೂಟಾ ಇಟ್ಟುಕೊಡ್ತಾರಾ? ಕಾಂಗ್ರೆಸ್ ನಾಯಕರು ನೋಡಿದರೆ ಬಿಜೆಪಿ ಶವಯಾತ್ರೆ ಅಂತಾರೆ. ಇವರು ನೋಡಿದ್ರೆ ಗೂಟದ ಕಾರ್ ಅಂತಾರೆ. ಇವರು ಯಾವ ಗೂಟದ ಕಾರ್ ಕೊಡ್ತಾರೆ ಅಂತ ಗೊತ್ತಿಲ್ಲ. ಇವೆಲ್ಲ ಈಗ ವರ್ಕ್ ಆಗೊಲ್ಲ ಎಂದರು.

ಇನ್ನೂ ಸೋಮಣ್ಣ ಬಳಸಿದ ಭಾಷೆ ನಮಗೆ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಆತಂಕ ಶುರುವಾಗಿದೆ. ಸೋಮಣ್ಣ ಅವರ ಇವತ್ತಿನ ಸ್ಥಿತಿ ನೋಡಿದರೆ ನಮಗೆ ಅರ್ಥ ಆಗುತ್ತದೆ. ಜೆಡಿಎಸ್ ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತು ಮಾತನಾಡಿ, ಬಹುಮತದ ಗುರಿ ಮುಟ್ಟಲು ನಮಗೆ ಸ್ವಲ್ಪ ಆರ್ಥಿಕ ಸಮಸ್ಯೆ ಇದೆ. ಆದರೂ ನಮಗೆ ಜನತೆ ಬೆಂಬಲ ದಲ್ಲಿ ನಂಬಿಕೆ ಇದೆ. 123 ಗುರಿ ನಾವು ತಲುಪುತ್ತೇವೆ. ನಾವು ಯಾರಿಗೂ ಹಣ ಕೊಟ್ಟು ಸರ್ವೆ ಮಾಡಿಸಿಲ್ಲ. ಅದರ ಅವಶ್ಯಕತೆ ನಮಗೆ ಇಲ್ಲ. ಜನರ ಬೆಂಬಲದ ಆಧಾರದಲ್ಲಿ ನಾವು ಬಹುಮತ ಬರುತ್ತೆ ಅಂತ ಹೇಳ್ತಿದ್ದೇವೆ. ಕೆಲವು ಖಾಸಗಿ ವಾಹಿನಿಗಳು 23- 24 ಅಂತ ತೋರಿಸ್ತಿದ್ದಾರೆ. ಪಾಪ ಅವರು 1 ಅಂಕಿ ಮುಂದೆ ಹಾಕೋದು ಮರೆತು ಹೋಗಿದ್ದಾರೆ. ಜೆಡಿಎಸ್ ಗೆ 123 ಸ್ಥಾನ ಈ ಬಾರಿ ಬರಲಿದೆ ಎಂದರು.
"ಸಿ" ಓಟರ್ ಕಾಂಗ್ರೆಸ್ ಪಕ್ಷ ಸಮೀಕ್ಷೆ ಬಗ್ಗೆ ಕೇಳಲಾದ ಪ್ರಶ್ನೆಯ ಬಗ್ಗೆ ಮಾತನಾಡಿದ ಅವರು, ಅವರ ಸಮೀಕ್ಷೆ ನಿಜ ಆಗಲ್ಲ. 150 ಸ್ಥಾನ ಕಾಂಗ್ರೆಸ್ ಗೆ ಬರುತ್ತೆ, ರಕ್ತದಲ್ಲಿ ಬರೆದುಕೊಡ್ತೀನಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಡಿ.ಕೆ.ಶಿವಕುಮಾರ್ ರಕ್ತದಲ್ಲಿ ಬರೆದು ಕೊಡೋದು ಬೇಡ. ಪಾಪ, ಅವರಿಗೆ ರಕ್ತದ ಕೊರತೆ ಆಗುತ್ತದೆ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.

ಯಡಿಯೂರಪ್ಪ ಅವರು ನೋಡಿದರೆ ಜಗದೀಶ್ ಶೆಟ್ಟರ್ ಸೋಲುತ್ತಾರೆ ಅಂತ ರಕ್ತದಲ್ಲಿ ಬರೆದು ಕೊಡ್ತೀನಿ ಅಂತಾರೆ. ಯಾವ ನಾಯಕರು ರಕ್ತದ ಕೊರತೆ ಮಾಡಿಕೊಳ್ಳೋದು ಬೇಡ. ನೀವು ರಕ್ತದ ಕೊರತೆ ಮಾಡಿಕೊಳ್ಳೋದು ಅಗತ್ಯ ಇಲ್ಲ. ಯಾರೂ ರಕ್ತದಲ್ಲಿ ಬರೆದು ಕೊಡೋದು ಬೇಡ. ನೀವು ಹೇಳೋದು, ರಕ್ತದಲ್ಲಿ ಬರೆದು ಕೊಡೋದು ಮುಖ್ಯ ಅಲ್ಲ. ಜನರು ಮತ ಕೊಡೋದು ಮುಖ್ಯ. ಕಾಂಗ್ರೆಸ್, ಬಿಜೆಪಿ ನಾಯಕರು ಯಾವ ಆಧಾರದಲ್ಲಿ 150 ಸ್ಥಾನ ಅಂತಾರೆ ಹೇಳಲಿ ಎಂದು ಪ್ರಶ್ನಿಸಿದರು.
ನೀವು ನನ್ನನ್ನು ಕೇಳಬಹುದು, 123 ಕ್ಷೇತ್ರ ಹೇಗೆ ಬರುತ್ತದೆ ಅಂತ. ನಾನು 106 ಕ್ಷೇತ್ರಗಳಲ್ಲಿ ನೇರವಾಗಿ ಜನರ ಭೇಟಿ ಮಾಡಿದ್ದೇನೆ. ನಿತ್ಯ ಒಂದೊಂದು ಕ್ಷೇತ್ರದಲ್ಲಿ 50-60 ಹಳ್ಳಿ ಸುತ್ತಿದ್ದೇನೆ. ಜನರ ಸಂಪರ್ಕದಲ್ಲಿ ಮಾಡಿದ್ದೇನೆ. ಪಂಚರತ್ನ, ಜನತಾ ಜಲಧಾರೆ ಯಾತ್ರೆಗಳು ಯಶಸ್ವಿಯಾಗಿವೆ. ನನ್ನ ರೋಡ್ ಶೋಗೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿಯಲ್ಲಿ ಜನ ಇಲ್ಲ ಅಂತ ಅಮಿತ್ ಶಾ ರೋಡ್ ಶೋ ಕ್ಯಾನ್ಸಲ್ ಆಯ್ತು. ಆದರೆ ನಮಗೆ ಜನರೇ ಆಶೀರ್ವಾದ ಮಾಡ್ತಾರೆ.












Click it and Unblock the Notifications