HD Kumaraswamy: ಚುನಾವಣಾ ಅಖಾಡಕ್ಕೆ ದೆಹಲಿ ನಾಯಕರ ಎಂಟ್ರಿ: ಇವರ ಆಟ ಇಲ್ಲೆಲ್ಲಾ ನಡೆಯುವುದಿಲ್ಲ ಎಂದ ದಳಪತಿ
ಮೈಸೂರು,ಏಪ್ರಿಲ್25: ಕಾಂಗ್ರೆಸ್ ಬಿಜೆಪಿಗಿಂತ ನಮ್ಮ ಜೆಡಿಎಸ್ ಸ್ಥಾನ ದೊಡ್ಡದಿರುತ್ತದೆ. ಅಮಿತ್ ಶಾ, ಪ್ರಿಯಾಂಕಾ ಆಟ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕನ್ನಡ ನಾಡಿಗೆ ಅವರ ಕೊಡುಗೆ ಏನು ಇಲ್ಲ. ಅಮಿತ್ ಶಾಗೆ ರಾಜ್ಯದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿಲ್ಲ. ಅವರ ಚುನಾವಣಾ ಪ್ರಚಾರದ ವೇಳೆ ಹೆಚ್ಚಿನ ಜನರು ಬರುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನಬೆಂಬಲ ಕಳೆದುಕೊಂಡಿದ್ಧಾರೆ. ಜೆಡಿಎಸ್ ಯಾರೊಂದಿಗೂ ಒಳಒಪ್ಪಂದ ಮಾಡಿಕೊಂಡಿಲ್ಲ. ಜೆಡಿಎಸ್ ನ ಸ್ವತಂತ್ರ ಸರ್ಕಾರ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ಹೊಸದಾಗಿ ಪಕ್ಷಕ್ಕೆ ಬಂದಿರುವವರ ಪೈಕಿಯೇ 20 ಮಂದಿ ಗೆಲ್ಲಲಿದ್ದಾರೆ. ಜೆಡಿಎಸ್ ಇಟ್ಟಿರುವ ನಿಗದಿತ ಗುರಿ ತಲುಪಿ ಯಾರ ಹಂಗು ಇಲ್ಲದೇ ಸರ್ಕಾರ ರಚಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ವರುಣ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಒಳ ಒಪ್ಪಂದ ವಿಚಾರವಾಗಿ ಮಾತನಾಡಿ, ಯಾವುದೇ ಕಾರಣಕ್ಕೂ ಆ ರೀತಿಯ ತೀರ್ಮಾನ ತೆಗೆದುಕೊಂಡಿಲ್ಲ. ನಮಗೆ ಇನ್ನೊಬ್ಬ ಅಭ್ಯರ್ಥಿಯನ್ನು ಸೋಲಿಸುವುದು ಮುಖ್ಯವಲ್ಲ, ನಮಗೆ ನಮ್ಮ ಅಭ್ಯರ್ಥಿ ಗೆಲುವೇ ಮುಖ್ಯ. ಭಾರತಿಶಂಕರ್ ಅವರು ಒಳ್ಳೆಯ ಅಭ್ಯರ್ಥಿ. ಈ ಹಿಂದೆ ಶಾಸಕರಾಗಿದ್ದಾಗ ಆ ಕ್ಷೇತ್ರದ ಮೂರು ಹೋಬಳಿಗಳನ್ನು ಪ್ರತಿನಿಧಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಸಮರ್ಥರಾಗಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ನನ್ನನ್ನು ಬೆಂಬಲಿಸಿದ್ದಾರೆ ಎಂಬ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಹೇಳಿಕೆಗೆ ತಿರುಗೇಟು ನೀಡಿದ ಎಚ್ ಡಿ ಕುಮಾರಸ್ವಾಮಿ, ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ಅವರು ನಿಲ್ಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡಗೆ ನಾನ್ಯಾಕೆ ಬೆಂಬಲ ನೀಡಲಿ ? ಒಕ್ಕಲಿಗರು ಸಿದ್ದೇಗೌಡ ಮಾತಿಗೆ ಕಿವಿಗೊಡಬೇಡಿ. ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಜಿ.ಟಿ.ದೇವೇಗೌಡ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.

ಇನ್ನೂ ಲಿಂಗಾಯತ ಮುಖ್ಯಮಂತ್ರಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಮುದಾಯದ ಪ್ರತಿನಿಧಿ ಅಲ್ಲ, ನಾಡಿನ ಪ್ರತಿನಿಧಿ. ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ. ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಪಕ್ಷಗಳು ನಾಯಕರನ್ನು ಆಯ್ಕೆ ಮಾಡುತ್ತವೆ. ಆದರೆ ನಾಡಿನ ಹಿತದೃಷ್ಟಿ ಇಟ್ಟುಕೊಂಡು ಸಿಎಂ ಕೆಲಸ ಮಾಡಬೇಕು. ಆ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಯೂ ಸರಿಯಲ್ಲ. ಅವರು ಒಬ್ಬ ಅನುಭವಿ ರಾಜಕಾರಣಿ.ಅಂಥವರ ಬಾಯಲ್ಲಿ ಆ ಮಾತು ಯಾಕೆ ಬಂತು ಅಂತ ಗೊತ್ತಿಲ್ಲ. ಯಾವ ಅರ್ಥದಲ್ಲಿ ಆ ಮಾತು ಹೇಳಿದ್ದರೋ ಗೊತ್ತಿಲ್ಲ. ಭ್ರಷ್ಟಾಚಾರ ವಿಚಾರ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದರು.
ಪ್ರಧಾನಿ ಮೋದಿ ರಾಮನಗರಕ್ಕೆ ಆಗಮನ ವಿಚಾರವಾಗಿ ಮಾತನಾಡಿ, ಪ್ರಧಾನಿಯನ್ನಾದರು ಕರೆಸಿಕೊಳ್ಳಲಿ, ಅಮೇರಿಕಾ ಅಧ್ಯಕ್ಷನನ್ನಾದರು ಕರೆಸಿಕೊಳ್ಳಲಿ. ನನಗೇನು ಆತಂಕ ಇಲ್ಲ,ಒಂದು ದಿನ ಭಾಷಣ ಮಾಡಿ ಹೋಗಬಹುದಲ್ವಾ? ಚನ್ನಪಟ್ಟಣಕ್ಕೆ ಮಂಡ್ಯ, ತುಮಕೂರಿನಿಂದ, ಮೈಸೂರಿನಿಂದ ಜನ ಸೇರಿಸಬಹುದು. ಒಂದು ಜಾತ್ರೆ ಮಾಡಿ ಹೋಗಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಾರೆ, ಅದನ್ನ ಹೊರತು ಪಡಿಸಿ ಜನಕ್ಕೆ ಅನುಕೂಲ ಆಗುವ ಕಾರ್ಯಕ್ರಮ ಮಾಡ್ತಾರಾ? ಎಂದು ಪ್ರಶ್ನಿಸಿದರು.
ಇನ್ನೂ ರಾಜ್ಯಾದ್ಯಂತ ಚುನಾವಣಾ ಪ್ರಚಾರವನ್ನ ನಡೆಸುತಿದ್ದ ಕುಮಾರಸ್ವಾಮಿ ಅವರು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ್ದು, ಗುಣಮುಖರಾದ ಬಳಿಕ ಬಳಿಕ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.












Click it and Unblock the Notifications