ರಾಜ್ಯದಲ್ಲಿ ದೊಂಬಿ, ಗಲಭೆಗಳ ಸದ್ದು; ಕಾಂಗ್ರೆಸ್ ಪಕ್ಷದ ‘ಗೂಂಡಾಗಿರಿ ಗ್ಯಾರಂಟಿ’ ಪ್ರಾರಂಭ: ನಳಿನ್‍ಕುಮಾರ್ ಕಟೀಲ್
ಬೆಂಗಳೂರು, ಮೇ 16: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ದೊಂಬಿ, ಗಲಭೆಗಳು ಹೆಚ್ಚಾಗಿವೆ. ಕಾಂಗ್ರೆಸ್ ಪಕ್ಷದ 'ಗೂಂಡಾಗಿರಿ ಗ್ಯಾರಂಟಿ' ಪ್ರಾರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯ ಯಾವ ಕಡೆ ಹೋಗುತ್ತಿದೆ ಎಂಬುದಕ್ಕೆ ಸ್ಪಷ್ಟ ಸಂದೇಶ ಇದಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ದ್ವೇಷದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ನಾಯಕರು ಹೇಗೆ ಇರುತ್ತಾರೋ, ಕಾರ್ಯಕರ್ತರೂ ಹಾಗೇ ಇರುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಬಂದ ಬಳಿಕ, ಕಾಂಗ್ರೆಸ್ ಬಹುಮತ ಪಡೆದ ನಂತರ ಕರ್ನಾಟಕವು ಗೂಂಡಾರಾಜ್ಯವಾಗಿ ಪರಿವರ್ತನೆ ಆಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಗಲಭೆ, ಹಲ್ಲೆ, ಹತ್ಯೆ, ದೊಂಬಿಗೆ ಕಾರಣವಾಗುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಇಂಥ ಘಟನೆಗಳು ನಡೆದಿವೆ. ಹೊಸಕೋಟೆಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಮ್ಮ ಕಾರ್ಯಕರ್ತ ಕೃಷ್ಣಪ್ಪ ಅವರ ಮನೆಗೆ ನುಗ್ಗಿ ಅವರ ಮಗ, ಕೃಷ್ಣಪ್ಪ, ಅವರ ಪತ್ನಿಗೆ ಹಲ್ಲೆ ಮಾಡಿದ್ದಾರೆ. ಕೃಷ್ಣಪ್ಪರ ಹತ್ಯೆ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿಜಯೋತ್ಸವದ ಹೆಸರಿನಲ್ಲಿ ಬಂದು ಕೃಷ್ಣಪ್ಪರ ಮನೆ ಮುಂದೆ ಪಟಾಕಿ ಸಿಡಿಸಿದ್ದರು. ದೂರದಲ್ಲಿ ಪಟಾಕಿ ಸಿಡಿಸಲು ಹೇಳಿದ್ದು, ಕೃಷ್ಣಪ್ಪರ ಹತ್ಯೆ ಮಾಡಿದ್ದಾರೆ. ಅವರ ಮಗ, ಕೃಷ್ಣಪ್ಪರ ಪತ್ನಿಯ ಮೇಲೂ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗಳಾಗಿವೆ. ಇಡೀ ಘಟನೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.
ರಾಜಕೀಯ ದ್ವೇಷ ಹತ್ತಾರು ಇರಬಹುದು; ಬಾಬಾಸಾಹೇಬರಂಥ ಶ್ರೇಷ್ಠ ಸಾಧಕರು ಮತ್ತು ಮಹಾನ್ ನಾಯಕ ವಿಗ್ರಹಕ್ಕೆ ಬೆಂಕಿ ಹಚ್ಚಿದ್ದಾರೆ ಎಂದರೆ ಅದು ಕಾಂಗ್ರೆಸ್ ಪಕ್ಷದ ಮಾನಸಿಕತೆಯನ್ನು ತಿಳಿಸುತ್ತದೆ. ದಲಿತರು, ಅಂಬೇಡ್ಕರರಿಗೆ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್. ಈ ಘಟನೆಗೆ ಸಂಬಂಧಿಸಿ ದೇಶದ ಮುಂದೆ ಕ್ಷಮೆ ಯಾಚಿಸಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಈ ಘಟನೆ ಕುರಿತು ಏನು ಹೇಳುತ್ತಾರೆ? ಅಂಬೇಡ್ಕರ್ ಅವರ ವಿಗ್ರಹಕ್ಕೆ ನಮಸ್ಕರಿಸುವ ಮಲ್ಲಿಕಾರ್ಜುನ ಖರ್ಗೆಯವರು ಇದಕ್ಕೆ ಏನು ವಿವರಣೆ ನೀಡುತ್ತಾರೆ ಪ್ರಶ್ನಿಸಿದರು.

ಪೊಲೀಸರು ನ್ಯಾಯದ ಪರ ಇರಬೇಕು. ಬೇರೆ ಬೇರೆ ಕಡೆ ಪಾಕಿಸ್ತಾನ ಜಿಂದಾಬಾದ್ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಾಕಿಸ್ತಾನ ನಿರ್ಮಿಸುತ್ತಿದೆಯೇ? ಎಂದು ಪ್ರಶ್ನಿಸಿದ ಅವರು, ಕರ್ನಾಟಕವನ್ನು ಗೂಂಡಾಗಿರಿ ರಾಜ್ಯ ಮಾಡುತ್ತಿದೆಯೇ? ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಘಟನೆಗೆ ಕಾರಣಕರ್ತರನ್ನು ತಕ್ಷಣ ಬಂಧಿಸಬೇಕು. ಘಟನೆಯ ಹಿಂದೆ ಇರುವವರನ್ನೂ ಬಂಧಿಸಬೇಕು. ದೊಡ್ಡ ನಾಯಕ, ದೊಡ್ಡ ಕಾರ್ಯಕರ್ತರಾದರೂ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತರ ಮನೆಗಳಿಗೆ ಪರಿಹಾರ ಕೊಡಬೇಕು ಎಂದ ಅವರು, ಯಾದಗಿರಿಯಲ್ಲೂ ಇಂಥ ಘಟನೆ ಆಗಿದೆ. ಅದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು. ಪೊಲೀಸರು ಕಾನೂನು- ಸುವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದರು.
ರಾಜ್ಯವನ್ನು ಗೂಂಡಾ ಸಾಮ್ರಾಜ್ಯ ಮಾಡುತ್ತಿದ್ದಾರೆ. ಕೆಲವೆಡೆ ತಾಲಿಬಾನ್‍ಗಳು ಎದ್ದು ನಿಂತಿದ್ದಾರೆ. ಈ ರಾಜ್ಯ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಮಾನಸಿಕತೆ ಗೊತ್ತಾಗುತ್ತಿದೆ. ಇದನ್ನು ಬಿಜೆಪಿ ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಹಿತ ಮಾತ್ರ ಬೇಕಿದೆ. ಅರಾಜಕತೆ, ಸುಳ್ಳು ಭರವಸೆ ಈಡೇರಿಸುವ ಸಮಸ್ಯೆ ಕಾಡುತ್ತಿದೆ. ಅರಾಜಕ ಪರಿಸ್ಥಿತಿ ನಿಯಂತ್ರಿಸದೆ ದೆಹಲಿಯಲ್ಲಿ ಕುರ್ಚಿಗಾಗಿ ಗುದ್ದಾಟ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಕಿಡಿಕಾರಿದರು.












Click it and Unblock the Notifications