ಹೈವೋಲ್ಟೇಜ್ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದು ಮಣಿಸುವರೇ ಸೋಮಣ್ಣ, ಇಲ್ಲಿದೆ ಇನ್‌ಸೈಡ್ ವಿಶ್ಲೇಷಣೆ
ಮೈಸೂರು, ಏಪ್ರಿಲ್ 28: ವರುಣಾ ವಿಧಾನಸಭಾ ಕ್ಷೇತ್ರ ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ ಸೋಮಣ್ಣ ಅವರ ನಡುವಿನ ರಣರಂಗವಾಗಿ ಇದು ಭಾಸವಾಗಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ಸಿದ್ದರಾಮಯ್ಯ ಅವರನ್ನು ಸೋಲಿಸಬಲ್ಲರೇ ಎಂದು ತಿಳಿಯೋಣ.
ಇಲ್ಲಿ ಜೆಡಿಎಸ್‌ನಿಂದ ಡಾ. ಭಾರತಿ ಶಂಕರ್ ಅವರು ನಾಮಪತ್ರ ಸಲ್ಲಿಸಿದ್ದರೆ, ಬಿಎಸ್‌ಪಿಯಿಂದ ಕೃಷ್ಣಮೂರ್ತಿ ಎಂ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಉಳಿದ ಪಕ್ಷಗಳು ಇಲ್ಲಿದೆ ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆದರೆ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಲೆ ಬಹುದೊಡ್ಡದಿದೆ. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎಂಬ ಶತಾಯಗತಾಯ ಹಠದಿಂದ ಬಿಜೆಪಿಯು ಲಿಂಗಾಯತ ಸಮುದಾಯದ ನಾಯಕ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ.

ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿಯೇ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪನವರ ನಂತರದ ಲಿಂಗಾಯತ ಮಠಗಳ ಸಂಪರ್ಕ ಹೊಂದಿರುವ ಲಿಂಗಾಯತ ನಾಯಕ ವಿ ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಲಿಂಗಾಯತರ ನಂತರದ ಸ್ಥಾನ ದಲಿತ ಸಮುದಾಯಗಳದ್ದು. ನಂತರ ಕುರುಬ ಮತದಾರರು ಇದ್ದಾರೆ.
ವಿ ಸೋಮಣ್ಣ ಅವರೇ ಕಣಕ್ಕೆ:
ಮೊದಲೆಲ್ಲಾ ಬಿಎಸ್ ಯಡಿಯೂರಪ್ಪನವರ ಮಗ ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ಕಣಕ್ಕೆ ಇಳಿಸುತ್ತದೆ ಎನ್ನಲಾಗುತ್ತಿತ್ತು. ಆದರೆ ಕಳೆದ ಚುನಾವಣೆಯಂತೆ ಈ ಬಾರಿಯೂ ಬಿವೈ ವಿಜಯೇಂದ್ರ ಗೆಲ್ಲುವ ಸಾಧ್ಯತೆಗಳು ಕಡಿಮೆ ಎನ್ನಲಾದ್ದರಿಂದ ಹಿರಿಯ ನಾಯಕ ವಿ ಸೋಮಣ್ಣ ಅವರನ್ನು ಕಣಕ್ಕೆ ಇಳಿಸಲಾಯಿತು.
2008ರಲ್ಲಿ ವರುಣಾ ವಿಧಾನಸಭಾ ಕ್ಷೇತ್ರ ರಚನೆಯಾಯಿತು. ಇದುವರೆಗೂ ಅಲ್ಲಿ ಮೂರು ಚುನಾವಣೆಗಳು ನಡೆದಿವೆ. ಮೊದಲ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಎಲ್ ರೇವಣಸಿದ್ದಯ್ಯ ಅವರ ವಿರುದ್ಧ 18,837 ಮತಗಳನ್ನು ಪಡೆದು ಜಯಶೀಲರಾಗಿದ್ದರು. ಬಳಿಕ 2013ರಲ್ಲಿ ಬಿಎಸ್‌ವೈ ಆಪ್ತರಾದ ಕಾಪು ಸಿದ್ದಲಿಂಗಸ್ವಾಮಿ ಅವರನ್ನು 19,641 ಮತಗಳಿಂದ ಸೋಲಿಸಿದ್ದರು.
58,616 ಮತಗಳ ಅಂತರದಿಂದ ಗೆದ್ದಿದ್ದ ಯತೀಂದ್ರ:
ಆ ನಂತರ ಅವರು 2018ರಲ್ಲಿ ವರುಣಾ ವಿಧಾನಸಭಾ ಕ್ಷೇತ್ರವನ್ನು ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟು ತಾವು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋದರು. ಆದರೆ 2018ರಲ್ಲಿ ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಯತೀಂದ್ರ ಅವರು ಬಿಜಪಿ ಅಭ್ಯರ್ಥಿ ಟಿ.ಬಸವರಾಜು ವಿರುದ್ಧ 58,616 ಮತಗಳ ಅಂತರದಿಂದ ಜಯಗಳಿಸಿದರು. ಹೀಗೆ ವರುಣಾ ವಿಧಾನಸಭಾ ಕ್ಷೇತ್ರ ರಚನೆಯಾದಗಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ.
ಇದು ನನ್ನ ಕೊನೆಯ ಚುನಾವಣೆ:
ಈಗ ತಮ್ಮ ತವರು ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಟಿಕೆಟ್ ಘೋಷಣೆಯಾಗುವ ಮೊದಲು ಕೋಲಾರದಿಂದಲೂ ಸಿದ್ದರಾಮಯ್ಯ ಸ್ಫರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಹೈಕಮಾಂಡ್ ಸೂಚನೆಯಂತೆ ಅವರು ಈಗ ವರುಣಾದಲ್ಲಿ ಮಾತ್ರವೇ ಸ್ಪರ್ಧೆ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಸ್ವತಃ ಸಿದ್ದರಾಮಯ್ಯ ಅವರೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ.
ವರುಣಾದಲ್ಲಿ ಈಗ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ತಮ್ಮ ಸ್ವತಃ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಬಿಟ್ಟು ವರುಣಾದಲ್ಲಿ ವಿ ಸೋಮಣ್ಣ ಅವರು ಕಣಕ್ಕೆ ಇಳಿದಿದ್ದಾರೆ. ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸೋಮಣ್ಣ ಅವರು ಜಿಲ್ಲೆಯಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಮುಂದಾಗಲಿಲ್ಲ. ಇದೇ ಈಗ ಅವರಿಗೆ ಮುಳುವಾಗಿದೆ. ವರುಣಾದಿಂದ ಸ್ಪರ್ಧೆ ಮಾಡುವ ಸೂಚನೆ ಸಿಕ್ಕಾಗಲೂ ಅವರು ಒಪ್ಪಿರಲಿಲ್ಲ. ಕಾರಣ ಇಲ್ಲಿ ಲಿಂಗಾಯತ ಮತಗಳಷ್ಟೇ ನಂಬಿಕೊಂಡು ಮುಂದುವರೆಯುವುದು ಅಷ್ಟು ಕಷ್ಟ ಎಂದು ಅವರಿಗೆ ಗೊತ್ತಾಗಿತ್ತು. ಅದಕ್ಕೆ ವರುಣಾದಲ್ಲಿ ಮಿಸ್ ಆದರೆ ಅಂತಾ ಅವರಿಗೆ ಚಾಮರಾಜನಗರದಲ್ಲೂ ಟಿಕೆಟ್ ನೀಡಲಾಗಿದೆ.
ಲಿಂಗಾಯತ ಮತಗಳ ದೃಷ್ಟಿ:
ಇಲ್ಲಿ 70 ವರ್ಷ ದಾಟಿರುವವರನ್ನು ಬಿಜೆಪಿ ಸೈಡ್ ಲೈನ್ ಮಾಡುತ್ತಿರುವುದರಿಂದ ವಿ ಸೋಮಣ್ಣ ಅವರನ್ನು ಕೈಬಿಡಬಹುದಾಗಿತ್ತು. ಆದರೆ ಸೋಮಣ್ಣ ರಾಜ್ಯದಲ್ಲಿ ಪ್ರಬಲ ನಾಯಕರಾಗಿರುವುದರಿಂದ ಲಿಂಗಾಯತ ಮತಗಳ ದೃಷ್ಟಿಯಿಂದ ಟಿಕೆಟ್ ನೀಡಲಾಯಿತು. ಆದರೆ ಅಸಲಿ ಆಟ ಶುರುವಾಗುವುದೇ ಇಲ್ಲಿ ಸೋಮಣ್ಣ ಅವರನ್ನು ಬದಿಗೂ ಸರಿಸಿದಂತಾಗುವುದು ಹಾಗೂ ಟಿಕೆಟ್ ನೀಡಿ ಲಿಂಗಾಯತ ಸಮುದಾಯವನ್ನು ಉಳಿಸಿಕೊಳ್ಳುವುದು.
ಹೋರಾಟಗಾರರ ಸಂಪರ್ಕ ಕಾಯ್ದುಕೊಂಡ ಸಿದ್ದು:
ಒಂದು ವೇಳೆ ಸಿದ್ದರಾಮಯ್ಯ ಅವರು ವರುಣಾದಲ್ಲಿ ಲಿಂಗಾಯತ ಮತಗಳನ್ನು ಕಳೆದುಕೊಂಡರು ದಲಿತ ಹಾಗೂ ಕುರುಬ ಸಮುದಾಯದ ಮತಗಳನ್ನು ಪಡೆಯುತ್ತಾರೆ. ಇತ್ತೀಚೆಗೆ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಂಘಟನೆಗಳ ಐಕ್ಯ ಸಮಿತಿ ಕೂಡ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿವೆ. ಮೊದಲಿನಿಂದಲೂ ದಲಿತ ಲೇಖಕರು ಹಾಗೂ ಹೋರಾಟಗಾರರ ಸಂಪರ್ಕವನ್ನು ಇಟ್ಟುಕೊಂಡ ಸಿದ್ದರಾಮಯ್ಯಗೆ ಗೆಲುವು ನಿಶ್ಚಿತ ಎನ್ನಬಹುದು.
ಇದೀಗ ಬಿಜೆಪಿ ಕಾರ್ಯಕರ್ತನಿಗೆ ಸಿದ್ದರಾಮಯ್ಯನಹುಂಡಿಯಲ್ಲಿ ಹಲ್ಲೆಯಾಗಿದೆ. ಆದರೆ ಇವೆಲ್ಲವು ಗ್ರೌಂಡ್ ಲೆವಲ್‌ನಲ್ಲಿ ಸಿದ್ದರಾಮಯ್ಯ ಮತಗಳಿಗೆ ಡ್ಯಾಮೇಜ್ ಮಾಡುವಷ್ಟು ಹೆಸರು ಕೆಟ್ಟಿಲ್ಲ, ಅಲ್ಲದೆ ಸಿದ್ದರಾಮಯ್ಯ ಪರ ಕ್ಷೇತ್ರದಲ್ಲಿ ಜನರ ಒಲವು ದೊಡ್ಡದಿದೆ. ಮೈಸೂರು ಭಾಗದ ಪ್ರಬಲ ಲಿಂಗಾಯತ ಮಠವಾದ ಸುತ್ತೂರು ಕೂಡ ಸಿದ್ದು ಬೆಂಬಲಕ್ಕೆ ಇದೆ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಗೆಲುವು ಕಷ್ಟ ಎನ್ನಬಹುದು.












Click it and Unblock the Notifications