KS Eshwarappa: ಈಶ್ವರಪ್ಪನವರಿಗೆ ಕರೆ ಮಾಡಿ ಮೋದಿ ಶ್ಲಾಘನೆ; ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ? ಕಾಂಗ್ರೆಸ್ ಕಿಡಿ
ಬೆಂಗಳೂರು,ಏಪ್ರಿಲ್21: ರಾಜ್ಯ ವಿಧಾನಸಭಾ ಚುನಾವಣೆಯ ಟಿಕೆಟ್ ಘೋಷಣೆಯಿಂದಾಗಿ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬೆಂಕಿ ಜೋರಾಗಿತ್ತು. ಟಿಕೆಟ್ ಕೈ ತಪ್ಪಿದ ಹಿನ್ನಲೆ ಹಲವು ನಾಯಕರು ಬಿಜೆಪಿಗೆ ಗುಡ್ ಬೈ ಹೇಳಿದ್ರೆ, ಇತ್ತ ಈಶ್ವರಪ್ಪ ಟಿಕೆಟ್ ಕೈ ತಪ್ಪಿದರೂ ಸೈಲೆಂಟ್ ಆಗಿ ಪಕ್ಷದ ಕಾರ್ಯಕ್ರಮದಲ್ಲಿ ತೊಡಗಿದ್ದು, ಮೋದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿ ಮಾತುಕಡೆ ನಡೆಸಿದ್ದು, ನಿಮ್ಮ ನಿರ್ಧಾರ ಉತ್ತಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ. ಈ ಶ್ಲಾಘನೆ ಏಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದು, 40% ಕಮಿಷನ್ ಲೂಟಿ ಮಾಡಿದ್ದಕ್ಕಾ?
ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ? ಅಥವಾ ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಮಿಷನ್ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಮೋದಿ ಕಮಿಷನ್ ಲೂಟಿಕೋರನಿಗೆ ಬೆಂಬಲಿಸಿದ್ದಾರೆ ಎಂದು ಪ್ರಧಾನಿ ಮೋದಿ ದೂರವಾಣಿ ಕರೆ ಕುರಿತು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
PM Modi congratulating BJP leader Eshwarappa for not rebelling despite being denied a BJP ticket is unacceptable!
— Congress (@INCIndia) April 21, 2023
This man is accused of demanding a 40% commission and was forced to resign over corruption charges after a BJP worker, Santosh Patil, committed suicide.
By praising… pic.twitter.com/8a2xvHqwQe
ಮಾಜಿ ಸಚಿವ ಈಶ್ವರಪ್ಪ ಗೆ ಪ್ರಧಾನಿ ಮೋದಿ ಕರೆ ಮಾಡಿ ಹೇಳಿದ್ದೇನು?
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪುತ್ರ ಕಾತೇಂಶ್ ಟಿಕೆಟ್ ನೀಡುವಂತೆ ಒತ್ತಡ ಹಾಕಿದ್ದು, ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ 7 ಗಂಟೆಗೆ ಈಶ್ವರಪ್ಪ ಗೆ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ನೀವು ನಡೆದುಕೊಂಡ ರೀತಿ ನನಗೆ ಖುಷಿ ತಂದಿದೆ. ಪಕ್ಷ ಸಂಘಟನೆಯಲ್ಲಿ ಪುನಃ ತೊಡಗಿಕೊಂಡಿರುವುದು ಹೆಮ್ಮೆ ಎನಿಸಿದೆ. ನಿಮ್ಮ ಕುಟುಂಬಕ್ಕೆ ಒಳ್ಳೇಯದಾಗಲಿ. ಮುಂದಿನ ದಿನಗಳಲ್ಲಿ ಒಳ್ಳೇಯದಾಗುತ್ತೆ ಎಂದು ನರೇಂದ್ರ ಮೋದಿ ಅವರು ಮೆಚ್ಚುಗೆಯನ್ನ ಸೂಚಿಸಿದ್ದಾರೆ.

ಮೋದಿ ದೂರವಾಣಿ ಕರೆ; ಈಶ್ವರಪ್ಪ ಹೇಳಿದ್ದೇನು?
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮುಂಜಾನೆ ಮಾಜಿ ಸಚಿವ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿ, ಇಂದು ಬೆಳಗ್ಗೆ ದೇಶದ ಪ್ರಧಾನಿ ವಿಶ್ವ ನಾಯಕ ನರೇಂದ್ರ ಮೋದಿ ನನಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದರು. ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಹೇಳಿದರು. ಕರ್ನಾಟಕಕ್ಕೆ ಬಂದಾಗ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.
ಈ ವೇಳೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ಶಿವಮೊಗ್ಗದಲ್ಲೂ ಬಿಜೆಪಿ ಗೆಲ್ಲಿಸುತ್ತೇವೆ ಎಂದು ಹೇಳಿದ್ದೇನೆ. ಸಾಮಾನ್ಯ ಕಾರ್ಯಕರ್ತರಿಗೂ ಬೆಂಬಲ ಸೂಚಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದಾಗ ನರೇಂದ್ರ ಮೋದಿ ಶುಭವಾಗಲಿ ಎಂದು ಹೇಳಿದರು. ನರೇಂದ್ರ ಮೋದಿ ಅವರು ಕರೆ ಮಾಡುತ್ತಾರೆ ಎಂದು ಕನಸು ಮನಸಲ್ಲೂ ಗೊತ್ತಿರಲಿಲ್ಲ, ಮೋದಿ ಅವರು ಕರೆ ಮಾಡಿದ್ದು ಸಂತೋಷ ತಂದಿದೆ ಜೊತೆಗೆ ಪ್ರೇರಣೆಯನ್ನೂ ನೀಡಿದೆ. ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications