ಸಮೀಕ್ಷೆ ವರದಿ ನಂಬಬೇಡಿ, ನನ್ನನ್ನು ಬಿಟ್ಟರೆ ಬೇರೆಯವರು ಮುಖ್ಯಮಂತ್ರಿ ಆಗಲ್ಲ: ಎಚ್ ಡಿ ಕುಮಾರಸ್ವಾಮಿ
ಶಿವಮೊಗ್ಗ,ಮೇ4: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಆರು ದಿನಗಳಷ್ಟೇ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಅಂತಿಮ ಹಂತದಲ್ಲಿ ಮತ ಓಲೈಕೆಗೆ ರಾಜಕೀಯ ಪಕ್ಷಗಳು ಮುಂದಾಗಿದ್ದು, ಹಿಂದಿನ ಸರ್ಕಾರದ ಸಾಧನೆಗಳ ಜೊತೆಗೆ ಬಜರಂಗಿಯೇ ರಾಜಕೀಯ ಪಕ್ಷಗಳ ಜಟಾಪಟಿಗೆ ಕಾರಣವಾಗಿದೆ.
ಈಗಾಗಲೇ ಹಲವು ಸಮೀಕ್ಷೆಗಳಲ್ಲಿ ಆಡಳಿತರೂಢ ಬಿಜೆಪಿಗೆ ಅಘಾತವಾಗಿದ್ದು, ಮೋದಿ ಅಲೆ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಮುಂದಾಗಿವೆ. ಇತ್ತ ರಾಜಕೀಯ ಪಕ್ಷಗಳ ನಾವೇ ಅಧಿಕಾರಕ್ಕೆ ಬರುವುದಾಗಿ ವಿಶ್ವಾಸವನ್ನ ವ್ಯಕ್ತಪಡಿಸಿದ್ದು, ಮತ್ತೆ ಕುಮಾರಸ್ವಾಮಿ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.

ಹೌದು, ಶಿವಮೊಗ್ಗದಲ್ಲಿ ಜಾತ್ಯತೀತ ಜನತಾದಳ ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಹಲವು ಸಮೀಕ್ಷೆಯನ್ನ ಯಾವುದೇ ಕಾರಣಕ್ಕೂ ನಂಬಬೇಡಿ. ನನ್ನ ಮೇಲೆ ದೈವ ಶಕ್ತಿ ಇದೆ. ಹೀಗಾಗಿ, ನನ್ನನ್ನು ಬಿಟ್ಟರೆ ಬೇರೆಯವರು ಮುಖ್ಯಮಂತ್ರಿ ಆಗಲ್ಲಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ನಾನು ರಾಜ್ಯದ ಜನರಿಗಾಗಿ, ರಾಜ್ಯದ ಅಭಿವೃದ್ದಿಗಾಗಿ ಪಂಚರತ್ನ ರಥಯಾತ್ರೆಯನ್ನ ನಡೆಸಿದ್ದು, ರಾಜ್ಯದ ಎಲ್ಲ ಭಾಗಗಳಲ್ಲೂ ನನ್ನ ಏಕಾಂಗಿ ಹೋರಾಟ ನಿರಂತರವಾಗಿ ನಡೆದಿದೆ. ಉತ್ತರ ಕರ್ನಾಟ ಭಾಗದಲ್ಲಿ ಈ ಬಾರೀ ಜೆಡಿಎಸ್ ಪಕ್ಷದ ಮೇಲೆ ಬಲ ಹೆಚ್ಚಾಗಿದ್ದು, ಈ ಬಾರಿ ಜೆಡಿಎಸ್ 30-35 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆ ಪವಿತ್ರವಾದದ್ದು, ಕುವೆಂಪು ಅವರ ಜನ್ಮಸ್ಥಳ, ಕುವೆಂಪು ಅವರ ನೆಲದಲ್ಲಿ ಸರ್ವಜನಾಂಗದ ಶಾಂತಿಯ ತೋಟದ ಸಂದೇಶವನ್ನು ಉಳಿಸುವ ಕೆಲಸವನ್ನು ಬಿಜೆಪಿಯವರು ಮಾಡಿಲ್ಲ. ಅಮಾಯಕ ಮಕ್ಕಳೊಂದಿಗೆ ರಕ್ತದೋಕುಳಿ ಆಡಿ ರಾಜಕೀಯ ಲಾಭ ಪಡೆದರು. ಇದಕ್ಕೆ ಇತಿಶ್ರೀ ಹಾಡುವ ಕಾಲ ಸನ್ನಿಹಿಸಿದೆ. ಅದಕ್ಕಾಗಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ಬೆಂಬಲಿಸಬೇಕು ಎಂದು ಜನತೆಗೆ ಮನವಿ ಮಾಡಿದರು.
ರಾಜ್ಯದಲ್ಲಿ ಭ್ರಷ್ಟಚಾರ ಜೋರಾಗಿದೆ. ನಾನು ಈ ಹಿಂದೆ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದೆ. ಬಿಜೆಪಿಯವರಂತೆ 40 ಪರ್ಸೆಂಟೇಜ್ ತಗೊಂಡಿದ್ದರೆ 10 ಸಾವಿರ ಕೋಟಿ ಸಂಪಾದನೆ ಮಾಡಬಹುದಿತ್ತು. ಅಧಿಕಾರದಲ್ಲಿದ್ದಾಗ ತೆರಿಗೆ ಹಣವನ್ನು ಲೂಟಿ ಹೊಡೆಯುವ ಕೆಲಸ ಮಾಡಿಲ್ಲ. ಸಾರಾಯಿ ನಿಷೇಧ, ಲಾಟರಿ ನಿಷೇಧ ಮಾಡಿದೆ. ಹಣ ಗಳಿಸಲಿಲ್ಲ. ಹೀಗಾಗಿ, ಈ ಬಿಜೆಪಿ ಕಿರಾತಕರ ನಡುವೆ ಚುನಾವಣೆ ನಡೆಸುವುದೇ ಕಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಮುಂದೆ ನಮ್ಮ ಸರ್ಕಾರ ಬರುತ್ತೇ ಈ ವೇಳೆ ಕೊಟ್ಟ ಮಾತಿನಂತೆ ಭರವಸೆಯನ್ನ ಈಡೇರಿಸುತ್ತೇವೆ. ಶಿವಮೊಗ್ಗ ಜಿಲ್ಲೆಯ ಸೊರಬ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಮತ್ತು ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೋರಿದರು. ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಗೌಡ ಅವರನ್ನು ಗೆಲ್ಲಿಸಿದ್ದರೆ ಈ ಭಾಗದ ಬಹುದೊಡ್ಡ ಕಾರ್ಖಾನೆಯಾಗಿದ್ದ ವಿಐಎಸ್‌ಎಲ್‌ಗೆ ಮರುಜೀವ ನೀಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.
ಈ ವೇಳೆ ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ಲೂಟಿ ಮಾಡಿದೆ. ನನ್ನ ರಾಜಕೀಯ ಬದುಕಿನಲ್ಲಿಒಂದೂ ಕಪ್ಪು ಚುಕ್ಕೆ ಇಲ್ಲ. ಆದರೂ ಇತ್ತೀಚೆಗೆ ಶಿವಮೊಗ್ಗಕ್ಕೆ ಬಂದಿದ್ದ ಬಿಜೆಪಿಯ ನಾಯಕರೊಬ್ಬರು ನನ್ನನ್ನು ಚರಂಡಿಗೆ ಹೋಲಿಸಿದ್ದಾರೆ. ಹಾಗಾದರೆ, 40 ಪರ್ಸೆಂಟ್, ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡವರು, ಧಾರ್ಮಿಕ ಭಾವನೆಗಳಿಗೆ ಪ್ರಚೋದನೆ ನೀಡುವವರು ಪವಿತ್ರರೆ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications