ರಾಜ್ಯದಲ್ಲಿ ಕಾಂಗ್ರೆಸ್ ಬರಲು ತಮ್ಮ ಕೊಡುಗೆ ಅಪಾರ, ನಾವು ನಿಮಗೆ ಆಭಾರಿ: ಬಿಎಲ್ ಸಂತೋಷ್‌ಗೆ ಸಚಿವ ಎಂಬಿ ಪಾಟೀಲ್ ಧನ್ಯವಾದ
ಬೆಂಗಳೂರು, ಜೂನ್ 17: ಲಿಂಗಾಯತರ ನಂತರ ನಿಮ್ಮ ಗುರಿ ಒಕ್ಕಲಿಗರಾ, ದಲಿತರಾ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ನೇರ ಪ್ರಶ್ನೆಯೊಂದನ್ನು ಕೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಬಿಎಲ್ ಸಂತೋಷ್ ಅವರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆಯೂ ಅಪಾರ. ಅದಕ್ಕೆ ನಾವು ನಿಮಗೆ ಆಭಾರಿ' ಎಂದು ಹೇಳಿದ್ದಾರೆ.

ನೀವು ಬಿಜೆಪಿಯಲ್ಲಿನ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ. ಇದೀಗ ಉಳಿದಿರುವ, ಏಕೈಕ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ಮುಗಿಸಲು ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಎತ್ತಿ ಕಟ್ಟುತ್ತಿದ್ದೀರಿ. ಜೊತೆಗೆ ನಿಮ್ಮ ಪಟ್ಟಾ ಶಿಷ್ಯ ಪ್ರತಾಪ ಸಿಂಹ ಅವರ ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುರಿನೆಟ್ಟಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದ ಇತ್ತೀಚಿನ ರಾಜಕಾರಣವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ವಿಶ್ವೇಶ್ವರ ಭಟ್ಟ ಅವರು ಹೇಳಿರುವ ಅತಿಯಾದ 'ಸಂತೋಷ'ವೇ ದುಃಖಕ್ಕೆ ಕಾರಣ. ಲಿಂಗಾಯತರ ನಂತರ ನಿಮ್ಮ ಗುರಿ ಒಕ್ಕಲಿಗರಾ, ದಲಿತರಾ? ಎಂದು ಎಂಬಿ ಪಾಟೀಲ್ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಲ್ ಸಂತೋಷ್, ಯಾಕೋ ಚೇಳು ಕುಟುಕಿದ ಹಾಗಾಗಿದೆಯಲ್ಲಾ ಪಾಟೀಲರೇ? ಎಂದು ಕಟುಕಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್
ಎಂಬಿ ಪಾಟೀಲ್ ಟ್ವೀಟ್‌ಗೆ ಪ್ರತಿಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಂಬಿ ಪಾಟೀಲರೇ, ನಿಮ್ಮ ಬಗ್ಗೆ ನನಗೆ ಅಯ್ಯೋ ಅನ್ನಿಸುತ್ತಿದೆ. ನಿಮ್ಮಲ್ಲಿ ಇರುವ ರೀತಿ ಎಲ್ಲಾ ಪಕ್ಷದಲ್ಲಿರುತ್ತದೆ ಎಂದು ಭಾವಿಸಬೇಡಿ. ದಲಿತ ನಾಯಕರಾದ ಶ್ರೀ ಡಾ. ಜಿ ಪರಮೇಶ್ವರ್ ಅವರನ್ನು ಮುಗಿಸಲು ಸಿದ್ದರಾಮಯ್ಯನವರು ಯಾರ ಹೆಗಲ ಮೇಲೆ ಇಟ್ಟು ಗುಂಡು ಹೊಡೆದರು? ಎಂದು ಪ್ರಶ್ನಿಸಿದ್ದಾರೆ.
ನಿಮಗೆ 'ಭಾರಿ ಸಂಪನ್ಮೂಲ' ಜಲಸಂಪನ್ಮೂಲ ಇಲಾಖೆ ಸಿಗಲಿಲ್ಲ ಅನ್ನುವ ಕಾರಣಕ್ಕೆ ಡಿ.ಕೆ ಶಿವಕುಮಾರ್ ಅವರ ವಿರುದ್ಧ ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟಿರುವುದು ಯಾರು? ಹಾ! ಮೊನ್ನೆ ನಿಮ್ಮ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಿಮಗೆ ಅಲ್ವಾ, 'Dont Disturb' ಅಂದಿದ್ದು, ನಿಮ್ಮಂತಹ ಹಿರಿಯ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಪಕ್ಷ ಹೀಗೆ ನಡೆಸಿಕೊಳ್ಳಬಾರದಿತ್ತು ಬಿಡಿ ಎಂದು ಲೇವಡಿ ಮಾಡಿದ್ದಾರೆ.

ಕರ್ನಾಟಕ ಚುನಾವಣೆಯಲ್ಲಿ ಬಿಎಲ್ ಸಂತೋಷ್ ಪಾತ್ರ
ಕರ್ನಾಟಕದ ವಿಧಾನಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಬಿಎಲ್ ಸಂತೋಷ್ ಪ್ರಮುಖ ಪಾತ್ರ ವಹಿಸಿದ್ದರು. ಹೊಸ ಮುಖಗಳಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಬಿಎಸ್ ಯಡಿಯೂರಪ್ಪ ಬಣವನ್ನು ಕೆರಳಿಸಿತ್ತು. ಬಿಎಲ್ ಸಂತೋಷ್ ಅವರ ನಿರ್ಧಾರದಿಂದಾಗಿಯೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದರೆಂದು ಹೇಳಲಾಗುತ್ತಿದೆ.

ಬಿಎಲ್ ಸಂತೋಷ್ ವಿರುದ್ಧ ಶೆಟ್ಟರ್ ಆಕ್ರೋಶ
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಆರು ಭಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿತ್ತು. ಈ ಬೆಳವಣಿಗೆಯಿಂದ ನೊಂದುಕೊಂಡು ಪಕ್ಷ ತೊರೆದಿದ್ದ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರು. ತಮಗೆ ಬಿಜೆಪಿಯಿಂದ ಟಿಕೆಟ್ ತಪ್ಪಿಸಿದ್ದು, ಬಿಎಪ್ ಸಂತೋಷ್ ಎಂದು ಸಾರ್ವಜನಿಕವಾಗಿಯೇ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಮತ್ತೊಬ್ಬ ಲಿಂಗಾಯತ ನಾಯಕರಾದ ವಿ ಸೋಮಣ್ಣ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಲಾಯಿತು. ಸಿದ್ದರಾಮಯ್ಯನವರ ಎದುರು ಸೋಮಣ್ಣ ಕಣಕ್ಕಿಳಿದರು. ಅಲ್ಲಿ ಸೋಮಣ್ಣ ಅವರು ಹೀನಾಯವಾಗಿ ಸೋಲುವಂತೆ ಮಾಡಲಾಯಿತು. ಇದಕ್ಕೂ ಬಿಎಲ್ ಸಂತೋಷ್ ಕಾರಣವೆಂಬ ಆರೋಪಗಳು ಕೇಳಿಬಂದಿವೆ.

ಈಗ ಪ್ರತಾಪ ಸಿಂಹ, ಸಿಟಿ ರವಿ ಅವರು ಬಿಜೆಪಿ ನಾಯಕರು ಹೊಂದಾಣಿಕೆ ರಾಜಕೀಯದಲ್ಲಿ ತೊಡಗಿದರು. ಆ ಕಾರಣದಿಂದಲೇ, ಬಿಜೆಪಿ ಸೋಲಾಗಿದೆ ಎಂದು ಹೇಳುತ್ತಿದ್ದಾರೆ. ಇದು ಬಿಜೆಪಿಯಲ್ಲಿನ ಒಳಬೇಗುದಿಯನ್ನು ಹೊರಹಾಕಿದೆ. ಸಂತೋಷ್ ಹಾಗೂ ಬಿಎಸ್‌ವೈ ಬಣಗಳ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರುವಂತೆ ಮಾಡಿದೆ.












Click it and Unblock the Notifications