• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ವರ್ಷದ ವ್ಯಕ್ತಿ 2014 - ನಿಮ್ಮ ಆಯ್ಕೆ?

By Prasad
|

"ಸದ್ಯ, ಇನ್ನಾದ್ರೂ ಮುಗೀತಾ ಬಂತಲ್ಲ, ಮುಂದಿನ ವರ್ಷ ಹೇಗಿದೆಯೋ ಏನೋ? ಕನಿಷ್ಠಪಕ್ಷ 2015ನೇ ವರುಷವಾದರೂ ಕನ್ನಡ ಜನತೆಗೆ ಹರುಷದಾಯಕವಾಗಿರಲಿ!" ಹೀಗೊಂದು ಉದ್ಗಾರದಿಂದಲೇ, ಹಲವಾರು ಹಗರಣ, ವಿವಾದಗಳ ಗಂಟು ಹೊತ್ತುಕೊಂಡು ಈ ವರ್ಷವನ್ನು ಅನಿವಾರ್ಯವಾಗಿ ಮುಗಿಸಬೇಕಾಗಿದೆ.

ಶಾಲಾ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ, ಮಲ್ಲಿಕಾರ್ಜುನ ಬಂಡೆ ಹತ್ಯೆ, ಕೆಪಿಎಸ್‌ಸಿ ಹಗರಣ, ನಂದಿತಾ ಕೊಲೆ ಪ್ರಕರಣ, ಕಸ ವಿಲೇವಾರಿ ಗಲಾಟೆ, ವಿಧಾನಸಭೆಯಲ್ಲಿ ಮತ್ತೆ ಇಣುಕಿದ ಮೊಬೈಲ್ ವಿವಾದಗಳ ನಡುವೆಯೂ ಸಿಎನ್ಆರ್ ರಾವ್ ಅವರಿಗೆ ಭಾರತ ರತ್ನ, ಕ್ರಿಕೆಟ್ ಅಂಗಳದಲ್ಲಿ ಕರ್ನಾಟಕದ ಜಯಭೇರಿ ಬಾರಿಸಿದ್ದು ಕತ್ತಲ ಕೋಣೆಯಲ್ಲಿ ಸೂರ್ಯನ ಕಿರಣ ಇಣುಕಿಬಂದಂತಾಗಿದೆ.

ಮಂಗಳಯಾನದ ಮೂಲಕ ಕನ್ನಡ ಮಾತೆಯ ಮುಡಿಗೆ ಮಲ್ಲಿಗೆ ತೊಡಿಸಿದ ಇಸ್ರೋದ ಸಾಧನೆ ಕಡಿಮೆಯೇನಲ್ಲ. ಬೆಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆ ಇನ್ನೇನು ಹಳ್ಳ ಹಿಡಿಯಲಿದೆ ಎಂಬಂಥ ಸಂದರ್ಭದಲ್ಲಿ, ಕೈಯಲ್ಲಿ ಲಾಠಿ ಹಿಡಿಯದೆ ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತಂದಿದ್ದು ಕಮಿಷನರ್ ಎಂಎನ್ ರೆಡ್ಡಿ ಅವರ ಕಾಣಿಕೆಯೂ ಸಣ್ಣದಲ್ಲ.

ವಿವಾದಗಳ ಮೂಟೆಯನ್ನು ಪಕ್ಕಕ್ಕೆ ತಳ್ಳಿ, ನಿರಾಶಾವಾದವನ್ನು ಮೂಲೆಗೆ ಸರಿಸಿ, ಆಶಾದಾಯಕವಾಗಿ ಮುಂದಿನ ವರ್ಷವನ್ನು ಇಣುಕಿ ನೋಡಲು, ಹೊಸ ಸಂಕಲ್ಪದಿಂದ ಮುಂದಡಿ ಇಡಲು ಈ ಸಾಧನೆಗಳು ನಮ್ಮನ್ನು ಪ್ರೇರೇಪಿಸುತ್ತವೆ. ಈಗ ಇಂಥ ಸಾಧಕರನ್ನು ಗುರುತಿಸಿ, ಅವರ ಕಾರ್ಯವನ್ನು ಶ್ಲಾಘಿಸಿ, ಬೆನ್ನುತಟ್ಟುವ ಕೆಲಸ ನಮ್ಮ ಓದುಗರದು.

ಕಳೆದ ಬಾರಿ ಎಸ್ಆರ್ ಹಿರೇಮಠ ಅವರು ಭಾರೀ ಮತಗಳಿಂದ ಒನ್ಇಂಡಿಯಾ ನೀಡಿದ ಪ್ರಶಸ್ತಿಗೆ ಭಾಜನರಾಗಿದ್ದರು. ಹಾಗಿದ್ದರೆ, 'ಕರ್ನಾಟಕ ವರ್ಷದ ವ್ಯಕ್ತಿ 2014' ಗರಿ ಈ ಬಾರಿ ಯಾರು ಭಾಜನರಾಗಲಿದ್ದಾರೆ? ಈ ವರ್ಷ ಕನ್ನಡದ ಕೀರ್ತಿಪತಾಕೆ ಹಾರಿಸಿದ ಕೆಲ ಸಾಧಕರ ಕಿರುಪರಿಚಯ ಇಲ್ಲಿ ನೀಡಲಾಗಿದೆ. ಇವರಲ್ಲಿ ಅತ್ಯುತ್ತಮವಾದವರನ್ನು, ಅವರ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಓದುಗರದು.

'ಭಾರತ ರತ್ನ' ಡಾ. ಸಿಎನ್ಆರ್ ರಾವ್

ಅಪ್ಪಟ ಕನ್ನಡ ಮಣ್ಣಿನವರಾದ 80 ವರ್ಷದ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ (ಸಿಎನ್ಆರ್ ರಾವ್) ಅವರಿಗೆ ಸಂದಿರುವ ಪ್ರಶಸ್ತಿಗಳಿಗೆ, ಮಂಡಿಸಿರುವ ವೈಜ್ಞಾನಿಕ ಪ್ರಬಂಧಗಳಿಗೆ, ನೀಡಿರುವ ಉಪನ್ಯಾಸಗಳಿಗೆ, ಜಾಗತಿಕವಾಗಿ ವಿಸ್ತರಿಸಿಕೊಂಡಿರುವ ವಿಶ್ವವಿದ್ಯಾಲಯಗಳಿಂದ ಪಡೆದಿರುವ ಗೌರವ ಡಾಕ್ಟರೇಟುಗಳಿಗೆ ಲೆಕ್ಕವೇ ಇಲ್ಲ.

ಆದರೆ, ವಿಜ್ಞಾನ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಅಗಾಧ ಕೊಡುಗೆಯನ್ನು ಮನ್ನಿಸಿ ಫೆಬ್ರವರಿ 4ರಂದು ಅವರಿಗೆ ನೀಡಲಾದ ಭಾರತದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ಪ್ರಶಸ್ತಿಯಿಂದ ಪ್ರಶಸ್ತಿಯ ಗೌರವ ನಿಜಕ್ಕೂ ಹೆಚ್ಚಾಗಿದೆ. ಭಾರತದ ಪ್ರಧಾನಿಗೆ ವೈಜ್ಞಾನಿಕ ಸಲಹೆಗಾರರಾಗಿರುವ ಸಿಎನ್ಆರ್ ರಾವ್ ಅವರದು ಎಲ್ಲರಿಂದಲೂ ಗೌರವಿಸಲ್ಪಡುವ ವ್ಯಕ್ತಿತ್ವ.

ಎಂಬತ್ತರ ಗಡಿ ದಾಟಿದ್ದರೂ ಯುವಕರನ್ನು ನಾಚಿಸುವಷ್ಟು ಚುರುಕಾಗಿರುವ ರಾವ್ ಅವರು ಮರಿ ವಿಜ್ಞಾನಿಗಳಿಗೆ ಮಾದರಿ. ಶಾಲಾ ಶಿಕ್ಷಣದಲ್ಲೇ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಇನ್ನಷ್ಟು ಅರಿವು ಮೂಡಿಸಬೇಕು, ವಿಜ್ಞಾನ ಕ್ಷೇತ್ರಕ್ಕೆ ಸರಕಾರದಿಂದ ಇನ್ನಷ್ಟು ಪ್ರೋತ್ಸಾಹ ಸಿಗಬೇಕು ಎಂದು ಮನವಿ ಮಾಡಿದ್ದಾರೆ. ಸತತ 63 ವರ್ಷಗಳಿಂದ ವಿಜ್ಞಾನಕ್ಕಾಗಿ ದುಡಿದಿದ್ದರೂ ಅವರಲ್ಲಿನ ಉತ್ಸಾಹ ಎಳ್ಳಷ್ಟೂ ಕಡಿಮೆಯಾಗಿಲ್ಲ. ನಿಮ್ಮ ಅಮೂಲ್ಯ ಮತ ಹಾಕಿ.

ಬೆಂಗಳೂರು ಪೊಲೀಸ್ ಕಮಿಷನರ್ ಎಂಎನ್ ರೆಡ್ಡಿ

ಒಂದೆಡೆ ಮಹಿಳೆಯರ ಮೇಲೆ ಆಗುತ್ತಿದ್ದ ದೌರ್ಜನ್ಯ ಮಿತಿಮೀರುತ್ತಿತ್ತು, ಮತ್ತೊಂದೆಡೆ ಪೊಲೀಸ್ ಇಲಾಖೆ ದೌರ್ಜನ್ಯಗಳನ್ನು ಹತ್ತಿಕ್ಕಲು ತಿಣುಕಾಡುತ್ತಿತ್ತು. ಇಂಥ ಸಮಯದಲ್ಲಿ ಬೆಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆಯ ನೊಗ ಹೊತ್ತವರು ಬೆಂಗಳೂರು ಪೊಲೀಸ್ ಕಮಿಷನರ್ ಎಂಎನ್ ರೆಡ್ಡಿ. ಮಾತಿನಲ್ಲಿ ಬಿದರಿಯಷ್ಟು ಖಡಕ್ ಅಲ್ಲದಿದ್ದರೂ, ಅಗಾಧವಾದ ಕಾರ್ಯಕ್ಷಮತೆಯಿಂದ ಬೆಂಗಳೂರನ್ನು ಒಂದು ಹಿಡಿತಕ್ಕೆ ತಂದವರು ಎಂಎನ್ ರೆಡ್ಡಿ.

ಸಾಮಾಜಿಕ ವೆಬ್ ತಾಣಗಳಲ್ಲಿ ಹಿಂದಿನ ಯಾವ ಕಮಿಷನರೂ ಮಾಡದ ಸಂಚಲನವನ್ನು ತಂದಿರುವುದು ರೆಡ್ಡಿ ಅವರ ಹೆಗ್ಗಳಿಕೆ. ಟ್ವಿಟ್ಟರ್, ಫೇಸ್ ಬುಕ್ ನಲ್ಲಿಯೇ ದೂರನ್ನು ದಾಖಲಿಸುವ ಮಟ್ಟಿಗೆ ಪೊಲೀಸ್ ಇಲಾಖೆ ಸೋಷಿಯಲ್ ಮೀಡಿಯಾದಲ್ಲಿ ಕಾರ್ಯನಿರತವಾಗಿದೆ. ಆಯುಕ್ತರ ಹಿಂದೆ ಪೊಲೀಸ್ ಇಲಾಖೆಗಳ ಎಲ್ಲಾ ಸಹಾಯಕ ಆಯುಕ್ತರು ಕೂಡ ರೆಡ್ಡಿ ಹಾಕಿದ ಹಾದಿಯಲ್ಲಿ ನಡೆಯುತ್ತಿದ್ದಾರೆ.

ಜಯಲಲಿತಾ ಜೈಲು ಪ್ರಕರಣ, ಉಗ್ರ ಮೆಹದಿ ಬಂಧನ, ಶಾಲೆಗಳಲ್ಲಿ ನಡೆಯುತ್ತಿದ್ದ ಅತ್ಯಾಚಾರಗಳ ಘಟನೆಗಳನ್ನು ಎಂಎನ್ ರೆಡ್ಡಿ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅಲ್ಲದೆ, ಪ್ರಾಮಾಣಿಕ ಪೇದೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ಎಂಎನ್ ರೆಡ್ಡಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕರ್ನಾಟಕ ವರ್ಷದ ವ್ಯಕ್ತಿಗೆ ಅವರು ಅರ್ಹರೆ? ಇಲ್ಲಿ ಮತ ಚಲಾಯಿಸಿ.

ಮೂಢನಂಬಿಕೆ ವಿರುದ್ಧ ಕಾಳಗಕ್ಕಿಳಿದಿರುವ ನಿಡುಮಾಮಿಡಿ ಶ್ರೀ

ಕರ್ನಾಟಕದಲ್ಲಿ ವಿಭಿನ್ನ ಪಂಗಡಗಳಿಗೆ ಸೇರಿದ ನೂರಾರು ಮಠಗಳಿವೆ, ಅದರಷ್ಟೇ ಸಂಖ್ಯೆಯ ಮಠಾಧಿಪತಿಗಳಿದ್ದಾರೆ. ಅವರಲ್ಲಿ ಹಲವಾರು ಕಾವಿಧಾರಿಗಳು ಸಮಾಜಸೇವೆಯಲ್ಲಿಯೂ ತೊಡಗಿದ್ದಾರೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮ ನಿಡುಮಾಮಿಡಿ ಸಂಸ್ಥಾನದ, ಯಾವುದೇ ಪಂಗಡಕ್ಕೂ ಸೇರದ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ವಿಭಿನ್ನವಾಗಿ ನಿಲ್ಲುತ್ತಾರೆ.

ಕರ್ನಾಟಕದ ಶೋಷಿತ ವರ್ಗದ ದನಿಯಾಗಿ, ಮೂಢನಂಬಿಕೆ, ಅನಿಷ್ಟ ಪದ್ಧತಿಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಸ್ಪಷ್ಟ ಕನ್ನಡದಲ್ಲಿ ಅವರಾಡುವ ಮಾತಿನ ವೈಖರಿಗೆ ವಿರೋಧಿಗಳು ಬೆಚ್ಚಿಬೀಳುವಂತೆ ವಾದ ಮಂಡಿಸುವುದರಲ್ಲಿ ನಿಡುಮಾಮಿಡಿ ಶ್ರೀಗಳು ನಿಸ್ಸೀಮರು. ವೈಚಾರಿಕತೆಯಿಂದ ತುಂಬಿರುವ ಅವರ ವಾಗ್ವಾದವನ್ನು ಕೇಳುವುದೇ ಒಂದು ಸೊಗಸು.

ಕುಕ್ಕೆ ಸುಬ್ರಮಣ್ಯದಲ್ಲಿ ಶತಮಾನಗಳಿಂದ ನಡೆಯುತ್ತಿರುವ ಮಡೆಮಡೆ ಸ್ನಾನವನ್ನು ವೈಜ್ಞಾನಿಕ ತಳಹದಿಯ ಮೇಲೆ ನಿಷೇಧಿಸಬೇಕೆಂದು ಹೋರಾಟ ನಡೆಸಿದವರಲ್ಲಿ ನಿಡುಮಾಮಿಡಿ ಶ್ರೀಗಳು ಮುಂಚೂಣಿಯಲ್ಲಿದ್ದರು. ಪೇಜಾವರ ಶ್ರೀಗಳನ್ನು 'ದ್ವಂದ್ವಾಚಾರ್ಯ' ಎಂದಿದ್ದ ಅವರು, ದೇವರ ಜೊತೆಗೆ ಭಕ್ತರಿಗೆ ಅಗ್ರ ಪೂಜೆ ಸಲ್ಲಬೇಕು ಎಂದು ವಾದ ಮಂಡಿಸಿದ್ದರು. ನಿಡುಮಾಮಿಡಿಗಳ ಮಾತು, ವೈಚಾರಿಕತೆಯನ್ನು ಒಪ್ಪುವುದಾದರೆ ಅವರಿಗೆ ಮತ ಹಾಕಿ.

ಕರ್ನಾಟಕ ಕ್ರಿಕೆಟ್ ಕ್ಯಾಪ್ಟನ್ ವಿನಯ್ ಕುಮಾರ್

ರಂಗನಾಥ್ ವಿನಯ್ ಕುಮಾರ್ ಅಪ್ಪಟ ಕನ್ನಡಿಗ. ದಾವಣಗೆರೆಯಲ್ಲಿ ಜನಿಸಿದ ವಿನಯ್ ಕುಮಾರ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಪ್ರೀತಿಯಿಂದ ದಾವಣಗೆರೆ ಮಿರ್ಚಿ ಎಕ್ಸ್ ಪ್ರೆಸ್ ಎಂದೇ ಕರೆಸಿಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ದೇಸಿ ಪ್ರತಿಭೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟು ಮಿಂಚದಿದ್ದರೂ ಕರ್ನಾಟಕದ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟವನ್ನೂ ಮೀರಿ ದಿಗಂತಕ್ಕೆ ಹಾರಿಸಿದವರು ವಿನಯ್ ಕುಮಾರ್. ಅದರಲ್ಲೂ 2014ರಲ್ಲಿ ವಿನಯ್ ಕುಮಾರ್ ಅವರ ಸಾಧನೆ ಅಪಾರ.

ಕರ್ನಾಟಕ ರಣಜಿ ತಂಡ ನಾಯಕರಾಗಿ ತಂಡಕ್ಕೆ ಅಭೂತಪೂರ್ವ ಯಶಸ್ಸು ತಂದು ಕೊಟ್ಟಿದ್ದಾರೆ. ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿ(ಏಕದಿನ) ಮೂರು ಟೂರ್ನಿ ಗೆದ್ದ ಏಕೈಕ ನಾಯಕನಾಗಿ ಕರ್ನಾಟಕದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ರಣಜಿ ಕಪ್ ಎತ್ತಿದ 6ನೇ ನಾಯಕರಾಗಿದ್ದಾರೆ. ಈ ಬಾರಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಫೈನಲ್ ತನಕ ಕೊಂಡೊಯ್ದಿದ್ದರು. ಅದರೆ, ಫೈನಲ್ ನಲ್ಲಿ ಮೈಸೂರು ತಂಡ ಜಯಭೇರಿ ಬಾರಿಸಿತ್ತು. ಅತ್ಯುತ್ತಮ ಬಲಗೈ ಮಧ್ಯಮ ವೇಗಿಯಾಗಿರುವ ವಿನಯ್ ಕುಮಾರ್ ಅವರ ವರ್ಷದ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಬೇಕಿದೆ.

ಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶ್ವರ ತೀರ್ಥರು

ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಹಾಲಿ ಪೀಠಾಧೀಶರು. ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರೆಂದೇ ಹೆಸರಾಗಿರುವ ಗುಬ್ಬಚ್ಚಿ ದೇಹದ, 83ರ ಹರೆಯದ ಶ್ರೀಗಳು ಚಲನಶೀಲರು, ಚಿಂತನಶೀಲರು.

ಮಡೆಸ್ನಾನವಿರಲಿ, ಪಂಕ್ತಿ ಭೋಜನವಿರಲಿ, ಕುರುಬರಿಗೆ ದೀಕ್ಷೆ ನೀಡುವ ವಿಷಯವಿರಲಿ, ರಾಘವೇಂದ್ರ ಸ್ವಾಮೀಜಿ ದೇವರಲ್ಲ ಎಂಬ ವಾದವಿರಲಿ... ಮಾತಿಗೆ ನಿಂತರೆ ತಮ್ಮ ನಿಲುವಿನಿಂದ ಎಂದೂ ಹಿಂದೆ ಸರಿಯುವವರಲ್ಲ, ಯಾವುದೇ ಒತ್ತಡಗಳಿಗೆ ಮಣಿಯುವವರಲ್ಲ. ಹೇಳಬೇಕೆಂದಿದ್ದನ್ನು ನೇರವಾಗಿ, ಖಡಕ್ಕಾಗಿ ಹೇಳಿಯೇ ಹಿಂದೆ ಸರಿಯುವಂಥವರು.

ಭಾರತ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ, ಹಾಗಾಗಿ ನಮ್ಮ ದೇಶದಲ್ಲಿ ಅಶಾಂತಿ ಹೆಚ್ಚಿದೆ. ಹೀಗಾಗಿ ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆನ್ನುವ ಇವರ ಹೇಳಿಕೆ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದವು. ಕುರುಬರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ ಎನ್ನುವ ಇವರ ಹೇಳಿಕೆ ಅನಗತ್ಯ ಗೊಂದಲಕ್ಕೆ ಕಾರಣವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಕೋರಿಕೆಯ ಮೇರೆಗೆ ಪೇಜಾವರ ಶ್ರೀಗಳು ಗಂಗಾ ನದಿ ಶುದ್ದೀಕರಣದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯಿದೆ. ಇಷ್ಟು ಇಳಿವಯಸ್ಸಿನಲ್ಲಿಯೂ ಯುವಕರು ನಾಚುವಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಪೇಜಾವರ ಶ್ರೀಗಳು 'ಕರ್ನಾಟಕ ವರ್ಷದ ವ್ಯಕ್ತಿ 2014' ಕಣದಲ್ಲಿದ್ದಾರೆ. ಮತ ಹಾಕಿ.

ಗುಂಡಿಗೆ ಬಲಿಯಾದ ಮಲ್ಲಿಕಾರ್ಜುನ ಬಂಡೆ

ಕಲಬುರಗಿಯ ಸಿಂಗಂ, ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಇಂದು ನಮ್ಮೊಂದಿಗಿಲ್ಲ. ಕಲಬುರಗಿಯಲ್ಲಿ ರೌಡಿಶೀಟರ್ ಮುನ್ನಾ ಜೊತೆಗೆ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡು ಎಂಟು ದಿನ ಸಾವು ಬದುಕಿನ ನಡುವೆ ಹೋರಾಡಿ ಬಂಡೆ ಜ.15ರಂದು ವಿಧಿವಶರಾದರು. ನಿಶ್ಚಲರಾದರೂ ಅವರು ಅಭಿಮಾನಿಗಳ ಹೃದಯದಲ್ಲಿ ಇನ್ನೂ ಅಚಲರಾಗಿದ್ದಾರೆ.

ಮಲ್ಲಿಕಾರ್ಜುನ್ ಬಂಡೆಯವರು ಹುಟ್ಟಿದ್ದು ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ಕಜೂರಿ ಗ್ರಾಮದಲ್ಲಿ. 1974ರಲ್ಲಿ ಜನಿಸಿದ ಅವರು ನಾಲ್ಕನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಬಡತನದ ನಡುವೆಯೇ ಕಷ್ಟಪಟ್ಟು ಓದಿದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

1997ರಲ್ಲಿ ಪೊಲೀಸ್ ಇಲಾಖೆಗೆ ಕಾನ್ಸ್‌ಟೇಬಲ್ ಆಗಿ ಸೇರಿದ ಮಲ್ಲಿಕಾರ್ಜುನ ಬಂಡೆ ಅವರು ಬಳಿಕ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 2004ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡರು. ಮಸ್ಕಿ, ಲಿಂಗಸಗೂರು, ಕಲಬುರಗಿಯ ರಾಘವೇಂದ್ರ ನಗರ, ಬೀದರ್ ಜಿಲ್ಲೆಯ ಹುಮ್ನಾಬಾದ್‌ಗಳಲ್ಲಿ ಮಲ್ಲಿಕಾರ್ಜುನ್ ಬಂಡೆ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ್ದಾರೆ.

ಜನವರಿ 8ರಂದು ಕಲಬುರಗಿ ನಗರದ ಮನೆಯೊಂದರಲ್ಲಿ ಮುಂಬೈ ಮೂಲದ ಭೂಗತ ಪಾತಕಿ ಮುನ್ನಾ ಅವಿತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ದಾಳಿ ನಡೆಸಲಾಯಿತು. ಧೈರ್ಯದಿಂದ ಪಾತಕಿ ಅಡಗಿದ್ದ ಮನೆಗೆ ನುಗ್ಗಿದ ಮಲ್ಲಿಕಾರ್ಜುನ್ ಬಂಡೆ ಮೇಲೆ ಮುನ್ನಾ ಗುಂಡಿನ ದಾಳಿ ನಡೆಸಿದ. ಪಾತಕಿಗಳನ್ನು ಕೊಂದ ಬಂಡೆ ಅವರ ತಲೆಗೆ ಗಂಭೀರವಾದ ಗಾಯವಾಯಿತು. ಒಂದು ವಾರ ಹೈದ್ರಾಬಾದ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿದ ಬಂಡೆ ಕೊನೆಗೂ ಬದುಕಿಬರಲಿಲ್ಲ. ಬಂಡೆ ನಿಮ್ಮ ಆಯ್ಕೆಯಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Person of the year 2014 - Your choice. Oneindia has nominated scientist Bharat Ratna CNR Rao, Bengaluru Police commissioner MN Reddi, cricketer Vinay Kumar, social reformer Nidumamidi seer, late police officer Mallikarjun Bande and Udupi pontiff Pejawar seer for the award. Who is your choice?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more