ಬಿಸಿಲಿನ ಹೊಡೆತಕ್ಕೆ ಕರುನಾಡ ಮಂದಿ ತತ್ತರ; ಶುರುವಾಯ್ತು ಚರ್ಮ ರೋಗದ ಕಾಟ- ಎಚ್ಚರವಾಗಿರಿ
ಬೆಂಗಳೂರು, ಮೇ 02: ಕರ್ನಾಟಕದಲ್ಲಿ ದಾಖಲೆಯ ತಾಪಮಾನ ಹೆಚ್ಚಳದೊಂದಿಗೆ ಕರುನಾಡ ಮಂದಿ ಹೈರಾಣಾಗಿದ್ದಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ರಾಜ್ಯಾದ್ಯಂತ ಬಿಸಿಲ ಬೇಗೆಗೆ ಜನ ಹೈರಾಣಾಗಿದ್ದಾರೆ.
ಹೌದು, ಕಳೆದ ವರ್ಷ ವಾಡಿಕೆಯಂತೆ ಮಳೆಯಾಗದೆ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಯುಗಾದಿಯ ಬಳಿಕ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿತ್ತು. ಆದರೆ, ಕಳೆದೆರಡು ತಿಂಗಳಿನಿಂದ ರಣ ಬಿಸಿಲಿನಿಂದ ಕರುನಾಡ ಮಂದಿ ರೋಸಿ ಹೋಗಿದ್ದು, ಬಿಸಿಲಿನ ಬೇಗೆಗೆ ಕುಸಿದು ರಾಜ್ಯದಲ್ಲಿ ಇಬ್ಬರು ಮಂದಿ ಸಾವನ್ನಾಪಿರುವ ಕುರಿತು ವರದಿಯಾಗಿದೆ. ಅಲ್ಲದೇ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಹೆಚ್ಚಾಗಿ ಕೂಲರ್ ಹಾಗೂ ಎಸಿಗಳಿಗೆ ಮೊರೆ ಹೋಗಿದ್ದು, ಇತ್ತ ಸೋರಿಯಾಸಿಸ್, ಮೊಡವೆಗಳು ಸೇರಿ 10ಕ್ಕೂ ಹೆಚ್ಚು ಚರ್ಮದ ರೋಗಗಳು ಜನರನ್ನ ಕಾಡುತ್ತಿವೆ.

ಸೂರ್ಯನ ಉರಿಗಣ್ಣಿನಿಂದ ರಾಜ್ಯದ ಬಹುತೇಕ ಜಿಲ್ಲೆಗಳು ಕಾದ ಹಂಚಿನಂತಾಗಿದೆ. ಬಿಸಿಲಿನ ಝಳಕ್ಕೆ ಜನತೆ ರೋಸಿ ಹೋಗಿದ್ದಾರೆ. ಬಿಸಿನಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿರುವುದರಿಂದ ಸೋರಿಯಾಸಿಸ್ ಸೇರಿ ಅನೇಕ ಸಮಸ್ಯೆಗಳು ಹೆಚ್ಚಾಗಿವೆ. ದಗೆ ತಡೆಯಲಾರದೇ ಜನರು ತಂಪು ಪಾನೀಯಗಳತ್ತ ಮುಖ ಮಾಡಿದ್ದು, ಜ್ಯೂಸ್ ಹಾಗೂ ಎಳೆನೀರಿಗೆ ಮೊರೆ ಹೋಗಿದ್ದಾರೆ.
ಇನ್ನೂ ಬಿಸಿಲಿನ ಹೊಡೆತದಿಂದ ರಕ್ತದಾನಿಗಳ ಸಂಖ್ಯೆಯೂ ಕುಂಠಿತವಾಗಿದೆ. ಬಿಸಿಲಿನ ಶಾಖ ಹೆಚ್ಚಾಗಿರುವ ಸಂದರ್ಭದಲ್ಲಿ ರಕ್ತದಾನ ಮಾಡಿದರೆ ಸುಸ್ತು, ಆಯಾಸವಾಗುತ್ತದೆ ಎಂಬ ಸುಳ್ಳು ಸುದ್ದಿಯಿಂದ ಹೆದರಿ ಜನರ ರಕ್ತದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರೆಡ್ ಕ್ರಾಸ್ ಹಾಗೂ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ಗಳಲ್ಲಿ ಪ್ರತಿ ತಿಂಗಳು 2,500 ರಿಂದ 3,000 ಸಾವಿರ ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೀಗ 1,500 ಯೂನಿಟ್ ಮಾತ್ರ ರಕ್ತ ಸಂಗ್ರಹವಾಗುತ್ತಿದೆ. ಇನ್ನೂ ರಸ್ತ ಸಿಗದೇ ಬೆಂಗಳೂರಿನಲ್ಲಿ ಮಕ್ಕಳು ಹಾಗೂ ರೋಗಿಗಳು ಪರದಾಡುವಂತಾಗಿದೆ.












Click it and Unblock the Notifications