ಕರ್ನಾಟಕದ ಮಂಗಳವಾರದ ತುಣುಕು ಸುದ್ದಿಗಳು
ಬೆಂಗಳೂರು, ಜ.20 : ಟ್ರ್ಯಾಕ್ಟರ್ ಮತ್ತು ಬಟ್ಟೆ ತೊಳೆಯಲು ಕಾಲುವೆಗೆ ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಯಾದಗಿರಿ ಸುರಪುರದ ಎಣ್ಣೆವಡೆಗೇರ ಗ್ರಾಮದಲ್ಲಿ ನಡೆದಿದೆ. ಕಾಲುವೆ ಬಳಿ ಹಿಮ್ಮುಖವಾಗಿ ಟ್ರ್ಯಾಕ್ಟರನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಗ, ಟ್ರ್ಯಾಕ್ಟರ್ ಪಲ್ಟಿಯಾಗಿ ಕಾಲುವೆಗೆ ಬಿದ್ದು ಈ ದುರಂತ ಸಂಭವಿಸಿದೆ.
ಮೃತಪಟ್ಟವರನ್ನು ಸುರಪುರದ ಎಣ್ಣೆವಡೆಗೇರ ಗ್ರಾಮದ ಗದದೆಮ್ಮ(30), ಕಾಳಿಂಗ(7), ಬೀರಲಿಂಗ(8) ಮತ್ತು ಟ್ರ್ಯಾಕ್ಟರ್ ಚಾಲಕ ಶರಣಪ್ಪ(28) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಶರಣಪ್ಪ ಇಬ್ಬರು ಮಕ್ಕಳೊಂದಿಗೆ ನಾರಾಯಣಪುರ ಎಡದಂಡೆ ಕಾಲುವೆಗೆ ತೆರಳಿದ್ದರು.

ವಿದ್ಯಾರ್ಥಿಗಳ ಮಾನವೀಯತೆಗೆ ಸಲಾಂ : ಕೋಲಾರದಲ್ಲಿ ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ಸಹಪಾಠಿಗೆ ಸಹಾಯ ಮಾಡಿ ವಿದ್ಯಾರ್ಥಿಗಳು ಮಾನವೀಯತೆ ಮೆರೆದಿದ್ದಾರೆ. ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಎನ್. ಒಂದು ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಳು.
ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಿನಿ ಅವರದ್ದು ಬಡ ಕುಟುಂಬವಾಗಿದೆ. ಇದನ್ನು ಅರಿತ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ 29, 000 ರೂ.ಗಳನ್ನು ಸಂಗ್ರಹಿಸಿ ಅಶ್ವಿನಿ ಕುಟುಂಬದವರಿಗೆ ನೀಡಿದ್ದಾರೆ. ಕಾಲೇಜಿನ ರೆಡ್ ಕ್ರಾಸ್ ಘಟಕವು 5000 ರೂ.ಗಳನ್ನು ನೀಡಿದೆ.
ಚಿತ್ರದುರ್ಗದಲ್ಲಿ ಅಪಘಾತಕ್ಕೆ ಎರಡು ಬಲಿ : ಟೆಂಪೋ ಟ್ರಾವಲರ್ ಮತ್ತು ಲಗೇಜ್ ಆಟೋ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಮೊಳಕಾಲ್ಮೂರು ತಾಲೂಕಿನ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿಯ ಮಲ್ಲಪ್ಪ (60), ನಾಗರಾಜು (38) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶನಿವಾರದಿಂದ ಬಿಸ್ಕೂಲ್ ಫೆಸ್ಟ್ : ಮಣಿಪಾಲ್‌ನ ಟಿಎಂಎ ಪೈ ಕಾಲೇಜು ಎರಡು ದಿನಗಳ ವಾರ್ಷಿಕ ಬಿಸ್ಕೂಲ್ ಫೆಸ್ಟ್‌ಅನ್ನು ಆಯೋಜಿಸಿದೆ. ಜನವರಿ 24 ಮತ್ತು 25ರಂದು ಈ ಕಾರ್ಯಕ್ರಮ ನಡೆಯಲಿದೆ. 'TAPMI-Atharva' ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.












Click it and Unblock the Notifications