Karnataka Name@50: ಕನ್ನಡ-ಸಂಸ್ಕೃತಿ ಇಲಾಖೆಯಿಂದ ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮ: ಸಚಿವ
ಬೆಂಗಳೂರು, ಜೂನ್ 09: ಮೈಸೂರು ರಾಜ್ಯ ಎಂಬುದಕ್ಕೆ 'ಕರ್ನಾಟಕ 'ಎಂದು ನಾಮಕರಣ ಗೊಂಡು 50 ವರ್ಷ ಪೂರ್ಣ ಗೊಳ್ಳುತ್ತಿದೆ. ಈ ವಿಶೇಷ 'ಸುವರ್ಣ' ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಲಾಖೆಯ ಆಯವ್ಯಯ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ಮೈಸೂರು ರಾಜ್ಯವಾಗಿದ್ದು 1973ರ ಅಕ್ಟೋಬರ್ 20 ರಂದು ಕರ್ನಾಟಕ ಎಂದು ಮರುನಾಮಕರಣವಾಯಿತು. ಇದೀಗ ಆ ಸಂಭ್ರಮಕ್ಕೆ 50 ವರ್ಷ ಪೂರೈಸುತ್ತಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ವರ್ಷವಿಡಿ ಆಯೋಜಿಸಲು ಸೂಕ್ತ ರೂಪರೇಷೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿ ಆಯವ್ಯಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಿದ್ದೇನೆ. ಆ ಮೂಲಕ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ವ್ಯಾಪಕವಾಗಿ ಮತ್ತು ಹೆಚ್ಚು ಆಕರ್ಷಣೀಯವಾಗಿ ಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ರವೀಂದ್ರ ಕಲ್ಲಾಕ್ಷೇತ್ರವನ್ನು ನವೀಕರಿಸಿ ಅಲ್ಲಿನ ಆಸನ ವ್ಯವಸ್ಥೆ ಧ್ವನಿ ಮತ್ತು ಬೆಳಕು ಗಳ ಸುಧಾರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
''ಕರ್ನಾಟಕದ ಪರಂಪರೆಯನ್ನು ಬಿಂಬಿಸುವಂತಹ ಚಾಲುಕ್ಯ ಉತ್ಸವ, ಆನೆಗುಂದಿ ಉತ್ಸವ ,ಲಕ್ಕುಂಡಿ ಉತ್ಸವ ,ಹಂಪಿ ಉತ್ಸವ, ನವರಸಪುರ ಉತ್ಸವ, ಕದಂಬ ಉತ್ಸವ, ಇಟಗಿ ಉತ್ಸವ ಹಾಗೂ ಕನಕಗಿರಿ ಉತ್ಸವ ಮುಂತಾದ ಉತ್ಸವಗಳನ್ನು'' ಇನ್ನು ಮುಂದೆ ನಿಗದಿತ ದಿನಾಂಕ ಗಳಂದು ಪ್ರವಾಸಿಗರ ಅನುಕೂಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆಯೋಜಿಸಲಾಗುವುದು. ಈ ಸಂಬಂಧ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು ಎಂದರು.
ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಜಾನಪದ ಲೋಕ ಸ್ಥಾಪನೆಗೆ ಸೂಕ್ತ ಯೋಜನೆ ರೂಪಿಸಬೇಕು. ಐತಿಹಾಸಿಕ ಸ್ಮಾರಕಗಳ ಮುಂದೆ ಪ್ರತಿ ತಿಂಗಳು ರಜಾ ದಿನಗಳಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ,ನಿರ್ದೇಶಕ ವಿಶ್ವನಾಥ ಪಿ ಹಿರೇಮಠ ಹಾಗೂ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications