Karnataka Rains: ರಾಜ್ಯದಲ್ಲಿ 1,000 ಮಿ.ಮೀ, ಕರಾವಳಿಗೆ 3,100 ಮಿ.ಮೀ.ಗೂ ಹೆಚ್ಚು ಬಿರುಗಾಳಿ ಮಳೆ ನಿರೀಕ್ಷೆ!
ಬೆಂಗಳೂರು, ಮೇ 07: ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಮುಂದುವರಿದಿದೆ. ಇನ್ನೂ ಮುಂಗಾರು ಮಳೆ 2025 ರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸುರಿಯಲಿದೆ. ಮೇ 10ರಿಂದ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ. ವಿವಿಧ ಭಾಗಗಳಲ್ಲಿ ಸಾವಿರಾರು ಮಿಲಿ ಮೀಟರ್‌ಗೂ ಹೆಚ್ಚಿನ ಮಳೆ ಆಗುವ ಲಕ್ಷಣ ಇದೆ ಎಂದು ತಿಳಿಸಲಾಗಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಕೋಲಾರ, ತುಮಕೂರು, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ 50 ಕಿಲೋ ಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಗಾಳಿ ಬೀಸಲಿದೆ. ಈ ಬಾರಿ ಪೂರ್ವ ಮುಂಗಾರು ಮಳೆ ಅತ್ಯಧಿಕವಾಗಿ ಸುರಿಯಲಿದೆ. ಇದರೊಂದಿಗೆ ಮೇ ಅಂತ್ಯಕ್ಕೆ ಸಕ್ರಿಯವಾಗುವ ಮುಂಗಾರು ಮಳೆ ಸುರಿಸುವ ಮಾರುಗಳು ಜೂನ್ ನಿಂದ ಸೆಪ್ಟಂಬರ್‌ವರೆಗೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಸಲಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

1000 ಮಿ.ಮೀ. ಮಳೆ ದಾಖಲು ಸಾಧ್ಯತೆ
ಕರ್ನಾಟಕದಲ್ಲಿ ಮುಂಗಾರು ಮಳೆಯ ಈ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು ವಾಡಿಕೆ 852 ಮಿಲಿ ಮೀಟರ್ ವಾಡಿಕೆ ಮಳೆ ಆಗಬೇಕು. ಈ ವರ್ಷ ವಾಡಿಕೆಗಿಂತ ಅಂದರೆ 1000 ಮಿಲಿ ಮೀಟರ್‌ಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಇದು ಕೃಷಿಗೆ ಹೆಚ್ಚಿನ ವರದಾನವಾಗಲಿದೆ. ಒಳನಾಡು, ಮಲೆನಾಡು ಹಾಗೂ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಉತ್ತಮ ಮಳೆ ದಾಖಲಾಗುವ ಸಾಧ್ಯತೆ ಇದೆ. ಈ ಬಾರಿಯ ಉತ್ತಮ ಮಳೆಗೆ 'ಲಾ ನೀನಾ' ಪರಿಸ್ಥಿತಿ ಉತ್ತಮವಾಗಿರಲಿದ್ದು, ಅದರ ಪ್ರಭಾವದಿಂದ ಮಳೆ ವಾತವರಣ ಕೃಷಿಗೆ ಪೂರಕವಾಗಲಿದೆ.
ಇನ್ನೂ ಉತ್ತರ ಒಳನಾಡಿನ ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಗದಗ, ಬೀದರ್ ಭಾಗಗಳಲ್ಲಿ ಮೇ 10ರ ನಂತರ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ. ಇನ್ನೂ ಕರಾವಳಿ ಭಾಗಕ್ಕೆ ಅತೀವ ಮಳೆ ಎಚ್ಚರಿಕೆ ನೀಡಲಾಗಿದೆ.
3,100 ಮಿ.ಮೀ. ಅಧಿಕ ಮಳೆ ನಿರೀಕ್ಷೆ
ಮುಂಗಾರು ಮಳೆ ಅವಧಿಯಲ್ಲಿ ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆ ಆಗುತ್ತದೆ. ಈ ಬಾರಿ 2025ರಲ್ಲಿ ವಾಡಿಕೆಗಿಂತ ಬರೋಬ್ಬರಿ 3,100 ಮಿಲಿ ಮೀಟರ್‌ಗೂ ಹೆಚ್ಚಿನ ವರ್ಷಧಾರೆ ಕಂಡು ಬರಲಿದೆ. ಇಲ್ಲಿ ಪ್ರತಿ ಬಾರಿಗಿಂತ ಈ ವರ್ಷ ಹೆಚ್ಚಿನ ವೇಗದಲ್ಲಿ ಗಾಳಿ ಬೀಸಲಿದೆ.
479 ಮಿ.ಮೀ. ಹೆಚ್ಚಿನ ಮಳೆ ಸಂಭವ
ಇನ್ನೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಅಂದರೆ ಒಟ್ಟು 1556 ಮಿಲಿ ಮೀಟರ್ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಉತ್ತರ ಕರ್ನಾಟಕದ ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಒಟ್ಟು 479 ಮಿಲಿ ಮೀಟರ್ ಮಳೆ ದಾಖಳಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ 369 ಮಿಲಿ ಮೀಟರ್ ಮಳೆ ದಾಖಲಾಗಲಿದೆ ಎಂದು ಹವಾಮಾಣ ಇಲಾಖೆ ಮುನ್ಸೂಚನೆ ನೀಡಿದೆ...












Click it and Unblock the Notifications