ಪರ್ಜನ್ಯ ಜಪದ ಬೆನ್ನಲ್ಲೇ ಮಳೆ, ಪಾಟೀಲರ ಪೂಜೆಗೂ ಬಂತು ಸಂಚಕಾರ!
ಮಳೆಗಾಗಿ ಪೂಜೆ ಸಲ್ಲಿಸಲು ಬಂದಿದ್ದ ಸಚಿವ ಎಂ ಬಿ ಪಾಟೀಲರಿಗೆ ಮಳೆ ಅಡ್ಡಿಪಡಿಸಿದ ಘಟನೆ ಮಡಿಕೇರಿಯಲ್ಲಿ ಭಾನುವಾರ (ಜೂ 4) ನಡೆದಿದೆ.
ಮೌಢ್ಯವೋ ಇನ್ನಂದೋ.. ಸಿದ್ದರಾಮಯ್ಯ ನಂಬುತ್ತಾರಾ.. ಬಿಡುತ್ತಾರಾ.. ಒಟ್ಟಿನಲ್ಲಿ ಅವರದೇ ಸಂಪುಟದ ಜನಸಂಪನ್ಮೂಲ ಖಾತೆಯ ಸಚಿವ ಎಂ ಬಿ ಪಾಟೀಲ್ ನಾಡಿನ ವಿವಿದೆಡೆ ಪರ್ಜನ್ಯ ಜಪ, ಪೂಜೆ ನಡೆಸುತ್ತಿದ್ದಾರೆ.
ಅಲ್ಲಲ್ಲಿ ಪೂಜೆ ನಡೆಸಿದ ಫಲವೋ, ಕಾಕತಾಳೀಯವೋ, ಕೊಡಗು ಜಿಲ್ಲೆ ಭಾಗಮಂಡಲದ ತಲಕಾವೇರಿಯಲ್ಲಿ 'ಮಳೆಗಾಗಿ ಪೂಜೆ'ಗೆ ಮಳೆಯೇ ಅಡ್ಡಿಯಾಗಿ, ಮಳೆ ನಿಂತ ನಂತರ ಸಚಿವ ಎಂ ಬಿ ಪಾಟೀಲ್, ಭಾನುವಾರ (ಜೂ 5) ಕಾವೇರಿಗೆ ಪೂಜೆ ಸಲ್ಲಿಸಿದ್ದಾರೆ. (ತಲಕಾವೇರಿಯಲ್ಲಿ ಸಚಿವ ಎಂ ಬಿ ಪಾಟೀಲ್ ವಿಶೇಷ ಪೂಜೆ)
ಕಾವೇರಿ ಜಲನಿಗಮದ ಅಧಿಕಾರಿಗಳ ವತಿಯಿಂದ ತಲಕಾವೇರಿಯಲ್ಲಿ ಪರ್ಜನ್ಯ ಜಪ ನಡೆಸಲಾಗಿತ್ತು. ಮಧ್ಯಾಹ್ನ ಸಚಿವ ಪಾಟೀಲ್ ಮತ್ತು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದ ಶ್ರೀಗಳು ಪೂಜೆ ಸಲ್ಲಿಸಿ, ಕಾವೇರಿಗೆ ಬಾಗಿನ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿತ್ತು.
ಆದರೆ, ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸಚಿವರು ಮತ್ತು ಶ್ರೀಗಳು ತಲಕಾವೇರಿ ತಲುಪುವುದು ವಿಳಂಬವಾಯಿತು. ಮಧ್ಯಾಹ್ನದ ನಂತರ ತಲಕಾವೇರಿಗೆ ಆಗಮಿಸಿದ ಸಚಿವರು ಮತ್ತು ಶ್ರೀಗಳು ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿದರು.
ಪರ್ಜನ್ಯ ಜಪದ ಫಲದಿಂದಲೇ ಮಳೆ ಸುರಿಯಿತು ಎಂದು ಅಲ್ಲಿ ನೆರೆದಿದ್ದ ಆಸ್ತಿಕ ವರ್ಗ ಮಾತನಾಡಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ ಸಚಿವ ಪಾಟೀಲರ ಉತ್ತರ, ಸಿಎಂ ಸಿದ್ದರಾಮಯ್ಯನರನ್ನೇ ಪ್ರಶ್ನಿಸುವಂತಿತ್ತು. ಮುಂದೆ ಓದಿ..

ಕಾವೇರಿ ಜಲನಿಗಮದ ಅಧಿಕಾರಿಗಳಿಂದ ಪೂಜೆ
ತಲಕಾವೇರಿಯಲ್ಲಿ ಭಾನುವಾರ ಮೊದಲು ಪರ್ಜನ್ಯ ಹೋಮ ಮತ್ತು ಜಪ ನಡೆಸಲು ಕಾವೇರಿ ಜಲನಿಗಮದ ಅಧಿಕಾರಿಗಳು ನಿರ್ಧರಿಸಿದ್ದರು. ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯನವರ ವಿರೋಧದಿಂದಾಗಿ ಸರಕಾರದ ವತಿಯಿಂದ ನಡೆಸಲು ನಿರ್ಧರಿಸಲಾಗಿದ್ದ ಪೂಜೆ, ಪುನಸ್ಕಾರವನ್ನು ಅಧಿಕಾರಿಗಳು ವೈಯಕ್ತಿಕವಾಗಿ ನಡೆಸಿದರು.

ಕಾವೇರಿ ಪೂಜಿಸುವುದು ತಾಯಿಯನ್ನು ಗೌರವಿಸಿದಷ್ಟೇ
ಪೂಜೆಯ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವ ಎಂ ಬಿ ಪಾಟೀಲ್, ಪೂಜೆ ಅಥವಾ ಹೋಮಗಳಲ್ಲಿ ಮುಖ್ಯಮಂತ್ರಿಗಳಿಗೆ ನಂಬಿಕೆ ಇಲ್ಲದೇ ಇರಬಹುದು. ನನಗಂತೂ ನಂಬಿಕೆಯಿದೆ. ಕಾವೇರಿಯನ್ನು ಪೂಜಿಸುವುದು ತಾಯಿಯನ್ನೇ ಗೌರವಿಸಿದಷ್ಟೇ.. ತಾಯಿಯ ಪೂಜೆ ಮೌಢ್ಯವಾಗಲು ಸಾಧ್ಯವೇ ಎನ್ನುವ ಪಾಟೀಲರ ಉತ್ತರ ಮುಖ್ಯಮಂತ್ರಿಗಳನ್ನೇ ಪ್ರಶ್ನಿಸಿದಂತಿತ್ತು.

ಮೌಢ್ಯ ಎನ್ನುವ ಸಿದ್ದರಾಮಯ್ಯ
ಮುಖ್ಯಮಂತ್ರಿಗಳು ಪರ್ಜನ್ಯ ಜಪ, ಹೋಮ ಎಲ್ಲಾ ಮೌಢ್ಯ ಎನ್ನುತ್ತಾರೆ, ಆದರೆ ಅವರ ಪತ್ನಿ ದೇವಸ್ಥಾನಕ್ಕೆ ಹೋಗುತ್ತಿಲ್ಲವೇ ಎಂದು ಪಾಟೀಲ್, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಹೋಮ, ಪೂಜೆಗೂ ಸರಕಾರಕ್ಕೂ ಸಂಬಂಧವಿಲ್ಲ
ಅತ್ತ ಮೈಸೂರಿನಲ್ಲಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯದ ಕೆಲವಡೆ ನಡೆಯುತ್ತಿರುವ ಮಳೆ ಸಂಬಂಧ ಹೋಮ, ಪೂಜೆಗೂ ಸರಕಾರಕ್ಕೂ ಸಂಬಂಧವಿಲ್ಲ. ಪಕೃತಿಯನ್ನು ನಂಬುವವನು ನಾನು, ಪೂಜೆ ಹೋಮಗಳನ್ನಲ್ಲ ಎಂದು ಸಿದ್ದು ಸ್ಪಷ್ಟ ಪಡಿಸಿದ್ದಾರೆ.

ನಾನಂತೂ ದೇವರನ್ನು ನಂಬುತ್ತೇನೆ
ಮುಖ್ಯಮಂತ್ರಿಗಳಿಗೆ ನಂಬಿಕೆ ಇಲ್ಲದಿದ್ದರೆ ನಾನೇನು ಮಾಡೋಣ, ನಾನಂತೂ ದೇವರನ್ನು ತುಂಬಾ ನಂಬುತ್ತೇನೆ. ಕಿಗ್ಗಾದಲ್ಲಿ ನಾನೇ ಹಲವು ಬಾರಿ ಮಳೆಗಾಗಿ ಪೂಜೆ ಸಲ್ಲಿಸಿದ್ದೇನೆಂದು ಡಿ ಕೆ ಶಿವಕುಮಾರ್ ಕೂಡಾ ಈ ಹಿಂದೆ ಹೇಳಿದ್ದರು.












Click it and Unblock the Notifications