Karnataka Rains: ವಾಯುಭಾರ ಕುಸಿತ: ರಾಜ್ಯದಲ್ಲಿ ಮಳೆ ಇಳಿಕೆ, ಚಳಿ ಹೆಚ್ಚಳ ಸಾಧ್ಯತೆ: IMD
ಬೆಂಗಳೂರು, ಡಿಸೆಂಬರ್ 27: ಕರ್ನಾಟಕದ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಒಂದೆರಡು ಜಿಲ್ಲೆಗಳಲ್ಲಿ ಗುರುವಾರ ಹಗುರ ಮಳೆ ದಾಖಲಾಗಿದೆ. ಮಧ್ಯಾಹ್ನ ವಿಪರೀತ ಬಿಸಿಲಿದ್ದರೂ ಸಹಿತ ಅಲ್ಲಲ್ಲಿ ಮಳೆ ಆಗಿದೆ. ಮುನ್ಸೂಚನೆ ಪ್ರಕಾರ, ಮುಂದಿನ 48 ಗಂಟೆಗಳ ಕಾಲ ಹಗರು ಮಳೆ ಮುಂದುವರಿಯುಬಹುದು. ಇದಕ್ಕೆ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರತ ಕುಸಿತ ಹಾಗೂ ಕಡಿಮೆ ಒತ್ತಡದ ಪ್ರದೇಶ ಕಾರಣವಾಗಿದೆ ಎಂದು IMD ಬೆಂಗಳೂರು ವಿಜ್ಞಾನಿ ಡಾ.ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಸುಳಿಗಾಳಿ ಇದ್ದು, ಸಮುದ್ರ ಮೇಲ್ಮೈನಿಂದ ಸುಮಾರು 3.1 ಕಿಲೋ ಮೀಟರ್‌ನಷ್ಟು ಎತ್ತರದಲ್ಲಿ ಗಾಳಿ ಇದೆ. ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದ್ದರಿಂದ ರಾಜ್ಯದಲ್ಲಿ ಹಗುರ ಮಳೆ ಆಗಬಹುದು. ಮುಂದಿನ 2ರಿಂದ 5 ದಿನಗಳ ಕಾಲ ನಗರದಲ್ಲಿ ಒಂದು ಕಡೆ ಮಳೆಯಾದರೆ ಮತ್ತೊಂದೆಡೆ ಚಳಿ ಹೆಚ್ಚಾಗಲಿದೆ. ಬಿಸಿಲಿನ ತಾಪವು ಅಧಿಕವಾಗಿರಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದ ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದರ್ಗುದಲ್ಲಿ ಹಗುರ ಮಳೆ ದಾಖಲಾಗಿದೆ. ಬೆಳಗ್ಗೆಯಿಂದ ಇದ್ದ ಮಬ್ಬು ವಾತಾವರಣ ಆಗಾಗ ಕಂಡು ಬಿಸಿಲಿನ ಮಧ್ಯೆ ಸಂಜೆ ಹಗುರ ಮಳೆ ಆಯಿತು. ಇದೇ ರೀತಿ ಇನ್ನೂ ಎರಡು ದಿನ ಮಳೆ ಆಗುವ ಲಕ್ಷಣ ಇದೆ.
ಒಳನಾಡು ಜಿಲ್ಲೆಗಳಲ್ಲಿ ಚಳಿ ಹೆಚ್ಚಳ
ರಾಜ್ಯದಲ್ಲಿ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಹಾವೇರಿ ಧಾರವಾಡ, ರಾಯಚೂರು, ಬೀದರ್, ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಕೋಲಾರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಬಳ್ಳಾರಿ, ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳು ಕನಿಷ್ಠ ಉಷ್ಣಾಂಶ 17 ರಿಂದ 19 ಡಿಗ್ರಿ ಸೆಲ್ಸಿಯಸ್ ವರೆಗೆ ಇರುವ ಸಾಧ್ಯತೆ ಇದೆ. ಅಂದರೆ ಕ್ರಮೇಣ ಚಳಿ ಹೆಚ್ಚಾಗುವ ನಿರೀಕ್ಷೆ ಇದು ಎನ್ನಬಹುದು.
ಬೆಂಗಳೂರಲ್ಲಿ ಇಂದು ಮಳೆ ನಿರೀಕ್ಷೆ
ಇನ್ನೂ ಬೆಂಗಳೂರಿನಲ್ಲಿ ಡಿಸೆಂಬರ್ 27ರಂದು ಶುಕ್ರವಾರ ಹಗುರ ಮಳೆ ಬೀಳುವ ನಿರೀಕ್ಷೆ ಇದೆ. ನಗರದಲ್ಲಿ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಐಎಂಡಿ ಮುನ್ಸೂಚನೆ ವರದಿ ಮಾಹಿತಿ ನೀಡಿದೆ.
ಗುರುವಾರ ಸುರಿದಂತೆ ಇಂದು ಶುಕ್ರವಾರವು ನಗರದ ವಿವಿಧೆಡೆ ತುಂತುರು ಮಳೆ ಸಂಭವವಿದೆ. ಇದರ ಹೊರತು ವಾತಾವರಣದಲ್ಲಿ ಅಂತದ್ದೇನು ಮಹತ್ವದ ಬದಲಾವಣೆ ಇಲ್ಲ. ಒಂದು ವೇಳೆ ವಾಯುಭಾರ ಕುಸಿತವು ತೀವ್ರ ಸ್ವರೂಪ ಪಡೆದುಕೊಂಡರೆ ಮಾತ್ರವೇ ತಮಿಳುನಾಡು, ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಮಾಡಬಹುದು.












Click it and Unblock the Notifications